ಜಾಟ್ ಪ್ರತಿಭಟನಾಕಾರರಿಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ: ಟ್ರಕ್ ಚಾಲಕರು
ಸೋನಿಪತ್,ಫೆ.28: ಕಳೆದ ಸೋಮವಾರ ರಾಷ್ಟ್ರ ರಾಜಧಾನಿಯಿಂದ ಕೇವಲ 50 ಕಿ.ಮೀ.ದೂರದಲ್ಲಿರುವ ಸೋನಿಪತ್ ಜಿಲ್ಲೆಯ ಮುರ್ತಾಲ್‌ನಲ್ಲಿ ನಡೆದಿತ್ತೆನ್ನಲಾದ ಮಹಿಳೆಯರ ಸಾಮೂಹಿಕ ಅತ್ಯಾಚಾರಗಳ ಪ್ರಕರಣವು ಹೊಸ ತಿರುವನ್ನು ಪಡೆದುಕೊಂಡಿದೆ. ಜಾಟ್ ಪ್ರತಿಭಟನಾಕಾರರು ಮಹಿಳೆಯರನ್ನು ಎಳೆದೊಯ್ದಿದ್ದನ್ನು ಮತ್ತು ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದನ್ನು ತಾವು ಕಣ್ಣಾರೆ ಕಂಡಿದ್ದೇವೆ ಎಂದು ಮೂವರು ಟ್ರಕ್ ಚಾಲಕರು ಹೇಳಿದ್ದಾರೆ.
ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸುಖವಿಂದರ್ ಸಿಂಗ್, ನಿರಂಜನ ಮತ್ತು ನರೇಶ ಕುಮಾರ್ ಅವರು ಪ್ರತಿಭಟನಾಕಾರರು ತಮ್ಮ ಟ್ರಕ್‌ಗಳಿಗೆ ಬೆಂಕಿ ಹಚ್ಚಿ ತಮ್ಮನ್ನು ಥಳಿಸಿದ ಬಳಿಕ ತಾವು ಜೀವವುಳಿಸಿಕೊಳ್ಳಲು ಪೊದೆಗಳಲ್ಲಿ ಅಡಗಿಕೊಂಡಿದ್ದೆವು.ದಾಳಿಕೋರರು ಮಹಿಳೆಯರನ್ನು ವಾಹನಗಳಿಂದ ಹೊರಗೆಳೆದಿದ್ದನ್ನು ಮತ್ತು ಅವರನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕದ ಹೊಲಗಳಿಗೆ ಒಯ್ಯುವ ಮುನ್ನ ಅವರ ಬಟ್ಟೆಗಳನ್ನು ಹರಿದು ಲೈಂಗಿಕ ಕಿರುಕುಳ ನೀಡಿದ್ದನ್ನು ತಾವು ನೋಡಿದ್ದೇವೆ ಎಂದು ಹೇಳಿದರು.
ಘಟನೆಯ ಬಗ್ಗೆ ಬಾಯಿ ಬಿಡದಂತೆ ‘‘ಮಫ್ತಿಯಲ್ಲಿರುವ ಪೊಲೀಸರು’’ತಮ್ಮ ಮೇಲೆ ಒತ್ತಡಗಳನ್ನು ಹೇರುತ್ತಿದ್ದಾರೆ ಎಂದು ಈ ಚಾಲಕರು ಆರೋಪಿಸಿದರು.
ಅತ್ತ ಘಟನೆಯ ತನಿಖೆಗಾಗಿ ಡಿಐಜಿ ಡಾ.ರಾಜಶ್ರೀ ಸಿಂಗ್ ಅವರ ನೇತೃತ್ವದಲ್ಲಿ ಸರಕಾರವು ರಚಿಸಿರುವ ಮೂವರು ಮಹಿಳಾ ಪೊಲೀಸ್ ಅಧಿಕಾರಿಗಳ ತಂಡವು ಮುರ್ತಾಲ್ ಸಮೀಪದ ಹಸನಪುರ ಗ್ರಾಮದಲ್ಲಿನ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸೋಮವಾರ ಬೆಳಗಿನ ಜಾವ ನಡೆದಿತ್ತೆನ್ನಲಾದ ಘಟನೆಯ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿದೆ. ಸಂತ್ರಸ್ತ ಮಹಿಳೆಯರಾಗಲೀ ಪ್ರತ್ಯಕ್ಷದರ್ಶಿಗಳಾಗಲೀ ವಿವರಗಳನ್ನು ನೀಡಲು ಮುಂದೆ ಬರುತ್ತಿಲ್ಲ ಎಂದು ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಹೊಲಗಳಲ್ಲಿ ಮಹಿಳೆಯರ ಕೆಲವು ಬಟ್ಟೆಗಳು ಪತ್ತೆಯಾಗಿದ್ದು,ಅವುಗಳನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿಗಾಗಿ ಕಾಯೋಣ ಎಂದರು.
ಪಂಜಾಬ್ ಹಾಗೂ ಜಮ್ಮು-ಕಾಶ್ಮೀರದ ಇಬ್ಬರು ಟ್ರಕ್ ಚಾಲಕರು ನಮ್ಮನ್ನು ಸಂಪರ್ಕಿಸಿದ್ದಾರಾದರೂ ಇಂತಹ ಯಾವುದೇ ಘಟನೆ ನಡೆದಿರುವುದನ್ನು ಅವರು ನಿರಾಕರಿಸಿದ್ದಾರೆ ಎಂದರು.







