ಎಚ್‌ಡಿಕೆ ವಿರುದ್ಧ ಖಾಸಗಿ ದೂರು ದಾಖಲು
ದುಬಾರಿ ಕೈಗಡಿಯಾರ ವಿವಾದ
ಬೆಳಗಾವಿ, ಫೆ.28: ರಾಜ್ಯದಲ್ಲಿ ಭಾರಿ ಸುದ್ದಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಡೈಮಂಡ್ ವಾಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ವಿರುದ್ಧ ಖಾಸಗಿ ದೂರು ದಾಖಲಾಗಿದೆ.
ಸಿಎಂ ದುಬಾರಿ ವಾಚ್ ವಿಚಾರವಾಗಿ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ, ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದರಲ್ಲದೆ, ಸಿಎಂ ಧರಿಸಿರುವ ವಾಚ್ ಕಳವಿನ ಮಾಲು ಎಂದ ಎಚ್‌ಡಿಕೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ಕುಮಾರಸ್ವಾಮಿ ಉದ್ದೇಶಪೂರ್ವಕವಾಗಿ ಸಿಎಂ ಅವರನ್ನು ಹಗರಣಗಳಲ್ಲಿ ಸಿಲುಕಿಸಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ ಮುನವಳ್ಳಿ, ಸಿಎಂ ಕೈಯಲ್ಲಿರುವ ವಾಚ್‌ನ್ನು ಡಾ.ಗಿರೀಶಚಂದ್ರ ಶರ್ಮಾ ನಾನೆ ನೀಡಿದ್ದು ಅಂತ ಹೇಳಿದ್ದಾರೆ. ವಾಚ್ ಕಳೆದುಕೊಂಡಿರುವ ಡಾ.ಸುಧಾಕರ ಶೆಟ್ಟಿ ವಾಚ್ ನನ್ನದ್ದಲ್ಲ ಅಂತಾ ಹೇಳಿಕೆ ನೀಡಿದ್ದಾರೆ. ಇಷ್ಟಾದ್ರೂ ಕುಮಾರಸ್ವಾಮಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಬ್ಬನ್‌ಪಾರ್ಕ್ ಪೊಲೀಸ್ ಠಾಣಾ ತನಿಖಾಧಿಕಾರಿ ಜೊತೆ ಸೇರಿ ಸಿದ್ದರಾಮಯ್ಯನವರ ವಿರುದ್ಧ ಒಳಸಂಚು ಮಾಡಿದ್ದಾರೆ. ತನಿಖಾಧಿಕಾರಿ ತನ್ನ ಗೌಪ್ಯತೆ ಕಾಪಾಡಿಕೊಳ್ಳವಲ್ಲಿ ವಿಫಲವಾಗಿದ್ದಾರೆ. ಕಳುವಿನ ಮಾಲು ತೆಗೆದುಕೊಂಡ ಆರೋಪ ಮಾಡಿರುವ ಕುಮಾರಸ್ವಾಮಿಯೇನು ಸತ್ಯಹರಿಶ್ಚಂದ್ರ ಅಲ್ಲ. ಸುಖಾಸುಮ್ಮನೆ ಎಚ್‌ಡಿಕೆ ಸಿದ್ದರಾಮಯ್ಯನವರ ವಿರುದ್ದ ಆರೋಪ ಮಾಡುತ್ತಿದ್ದಾರೆ. ಇದರಿಂದ ಎಚ್‌ಡಿಕೆ ವಿರುದ್ಧ ಬೆಳಗಾವಿ ಜೆಎಂಎಫ್‌ಸಿ ಮೂರನೆ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಿಸಿದ್ದೇನೆ ಎಂದರು. ಸಿ.ಆರ್.ಪಿ.ಸಿ 1773, ಸೆಕ್ಷನ್ 166, 166ಅ, 193, 195ಅ ಅಡಿಯಲ್ಲಿ ದೂರು ದಾಖಲಿಸಿದ್ದೇನೆ. ಈ ಪ್ರಕರಣದಲ್ಲಿ ಕುಮಾರಸ್ವಾಮಿಯನ್ನು ಪ್ರಥಮ ಆರೋಪಿಯನ್ನಾಗಿಸಿದ್ದು, ಕಬ್ಬನ್ ಪಾರ್ಕ್ ಠಾಣಾಧಿಕಾರಿಯನ್ನು ಎರಡನೆಯ ಆರೋಪಿಯನ್ನಾಗಿಸಿ ದೂರು ದಾಖಲು ಮಾಡಲಾಗಿದೆ ಎಂದು ತಿಳಿಸಿದರು.





