ಸಿಬಿಐ ತನಿಖೆಗೆ ಆಗ್ರಹ ‘ವರ್ಷದ ದೊಡ್ಡ ಹಾಸ್ಯ’: ಉಗ್ರಪ್ಪ ಲೇವಡಿ
ಕೈ ಗಡಿಯಾರ ವಿವಾದ
ಬೆಂಗಳೂರು, ಫೆ. 28: ಸಿಎಂ ಸಿದ್ದರಾಮಯ್ಯಗೆ ಸ್ನೇಹಿತರ್ಬೊರು ಕೊಡುಗೆಯಾಗಿ ನೀಡಿದ ದುಬಾರಿ ಮೊತ್ತದ ಕೈ ಗಡಿಯಾರವನ್ನು ‘ರಾಜ್ಯ ಸರಕಾರದ ಆಸ್ತಿ’ಯನ್ನಾಗಿ ಘೋಷಿಸಿದ್ದಾರೆ. ಆದರೆ, ಮಾಜಿ ಸಿಎಂ ಕುಮಾರಸ್ವಾಮಿ ಕೈ ಗಡಿಯಾರದ ಪ್ರಕರಣ ಸಿಬಿಐ ತನಿಖೆಗೆ ಆಗ್ರಹಿಸಿರುವುದು ‘ವರ್ಷದ ಹಾಸ್ಯ’(ಜೋಕ್ ಆಫ್ ದಿ ಇಯರ್) ಎಂದು ಕಾಂಗ್ರೆಸ್ ವಕ್ತಾರ ವಿ.ಎಸ್. ಉಗ್ರಪ್ಪ ಲೇವಡಿ ಮಾಡಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕನಾಯಕ ಜಯಪ್ರಕಾಶ್ ನಾರಾಯಣ್ ಹೆಸರೇಳುವ ಕುಮಾರ ಸ್ವಾಮಿ ತಮ್ಮ ಬಳಿಯಿರುವ 1.30 ಕೋಟಿ ರೂ. ಮೊತ್ತದ ಕೈ ಗಡಿಯಾರಗಳನ್ನು ಚುನಾವಣಾ ಆಯೋಗಕ್ಕೆ ನೀಡಿರುವ ಆಫಿದಾವಿತ್‌ನಲ್ಲಿ ಉಲ್ಲೇಖಿಸಿಲ್ಲ. ಆದರೂ, ಇದೀಗ ಆ ಗಡಿಯಾರಗಳನ್ನು ಏನು ಮಾಡುತ್ತಾರೆಂದು ಜನತೆಗೆ ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.
ಯಾವ ಮನೆಗೆ ಹೋಗಬೇಕು: ಕುಮಾರ ಸ್ವಾಮಿ ಜೀವನದಲ್ಲಿ ತಪ್ಪು ಮಾಡಿದ್ದೇನೆಂದು ಹೇಳಿಕೊಂಡಿದ್ದು, ಆ ತಪ್ಪೇನೆಂದು ಸಾರ್ವಜನಿಕ ವಾಗಿ ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದ ಉಗ್ರಪ್ಪ, ಅವರ ಮನೆ ಪರಿಶೀಲನೆಗೆ ತೆರಳಲು ನಾವು ಸಿದ್ಧ. ಆದರೆ, ಯಾವ ಮನೆಗೆ ಹೋಗಬೇಕು ಎಂದು ಮಾಧ್ಯಮದವರ ಪ್ರಶ್ನೆಗೆ ಮರು ಪ್ರಶ್ನೆ ಹಾಕಿದರು.
‘ಕಾಂಗ್ರೆಸ್ ಹೈಕಮಾಂಡ್ ಸಿದ್ಧರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುತ್ತಿದೆ ಎಂಬುದು ವಿಪಕ್ಷಗಳ ಕಪೋಲ ಕಲ್ಪಿತ ಹೇಳಿಕೆಯಷ್ಟೇ. ಕಾಂಗ್ರೆಸ್ ಯಾವುದೇ ವ್ಯಕ್ತಿಯನ್ನು ಅವಧಿಗೆ ಮೊದಲೇ ಅಧಿಕಾರದಿಂದ ಕೆಳಗಿಳಿಸಿದ ಉದಾಹರಣೆ ಇಲ್ಲ. ಸಿದ್ದರಾಮಯ್ಯ ಪ್ರಮಾಣಿಕ ವ್ಯಕ್ತಿ. ಅವರ ಜನಪರ ಯೋಜನೆಗಳು ಬಿಜೆಪಿ- ಜೆಡಿಎಸ್ ಭವಿಷ್ಯಕ್ಕೆ ಅಡ್ಡಿಯಾಗುವ ಆತಂಕದಿಂದ ಅಪಪ್ರಚಾರದಲ್ಲಿ ತೊಡಗಿವೆ’
-ವಿ.ಎಸ್.ಉಗ್ರಪ್ಪ ಕಾಂಗ್ರೆಸ್ ವಕ್ತಾರ







