ಕಾರ್ಪೊರೇಟ್, ರೈತನ ಓಲೈಕೆಗೆ ಮೋದಿ, ಜೇಟ್ಲಿ ಕಸರತ್ತು

ಹೊಸದಿಲ್ಲಿ, ಫೆ.28: ಸೋಮವಾರ ಸಂಸತ್ತಿನಲ್ಲಿ ತನ್ನ ತೃತೀಯ ಮುಂಗಡಪತ್ರವನ್ನು ಮಂಡಿಸಲಿರುವ ವಿತ್ತಸಚಿವ ಅರುಣ್ ಜೇಟ್ಲಿ ಅವರು ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳ ಅಗತ್ಯಗಳನ್ನು ಸಮತೋಲನ ಗೊಳಿಸಬೇಕಾದ ಕಠಿಣ ಸವಾಲು ಎದುರಿಸುತ್ತಿದ್ದಾರೆ. ಇದೇ ವೇಳೆ ಜಾಗತಿಕ ಪ್ರತಿಕೂಲ ಸ್ಥಿತಿಗಳ ನಡುವೆಯೂ ಹೆಚ್ಚಿನ ಬೆಳವಣಿಗೆಗಾಗಿ ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸಲು ಸಂಪನ್ಮೂಲ ಕ್ರೋಡೀಕರಣವನ್ನು ಅವರು ಬಯಸಿದ್ದಾರೆ.
ಆದಾಯ ತೆರಿಗೆಗೆ ಸಂಬಂಧಿಸಿದಂತೆ ಮುಂಗಡಪತ್ರದಲ್ಲಿ ತೆರಿಗೆಗೆ ಅರ್ಹ ಆದಾಯ ಮಿತಿಗಳಲ್ಲಿ ಯಥಾಸ್ಥಿತಿ ಮುಂದು ವರಿಯಬಹುದು ಮತ್ತು ವಿನಾಯ್ತಿಗಳು ಪರಿಷ್ಕರಣೆಗೊಳ ಪಡಬಹುದು.
ಸತತ ಬರಗಾಲಗಳಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಸಂಕಷ್ಟಗಳು ಸಾಮಾಜಿಕ ಯೋಜನೆಗಳಿಗಾಗಿ ಹೆಚ್ಚು ಹಣವನ್ನು ವ್ಯಯಿಸಲು ವಿತ್ತಸಚಿವರ ಮೇಲೆ ಗಣನೀಯ ಒತ್ತಡವನ್ನು ಹೇರಿವೆ. ಇದೇ ವೇಳೆ ತ್ವರಿತ ಸುಧಾರಣೆ ಕ್ರಮಗಳಿಗಾಗಿ ಕಾತುರದಿಂದ ಕಾಯುತ್ತಿರುವ ವಿದೇಶಿ ಹೂಡಿಕೆದಾರರ ವಿಶ್ವಾಸವನ್ನೂ ಅವರು ಮರಳಿ ಗೆದ್ದುಕೊಳ್ಳಬೇಕಾಗಿದೆ.
ಸರಕಾರಿ ನೌಕರರ ವೇತನ ಹೆಚ್ಚಳಕ್ಕೆ ಏಳನೆ ವೇತನ ಆಯೋಗದ ಶಿಫಾರಸುಗಳಿಂದಾಗಿ 1.02 ಕೋ.ರೂ.ಗಳಷ್ಟು ಭಾರೀ ಮೊತ್ತವನ್ನು ಪಾವತಿಸಬೇಕಾಗಿರುವುದು ಜೇಟ್ಲಿಯವರ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ. ಮುಂದಿನ ವರ್ಷ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.3.5ಕ್ಕೆ ತಗ್ಗಿಸುವ ತನ್ನ ಹಿಂದಿನ ಪ್ರಕಟಿತ ಗುರಿಯೊಂದಿಗೆ ರಾಜಿಯನ್ನು ಮಾಡಿಕೊಳ್ಳದೆ ಅವರು ಇದನ್ನು ಎಷ್ಟರ ಮಟ್ಟಿಗೆ ಸಾಧಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಕಾರ್ಪೊರೇಟ್ ತೆರಿಗೆಯನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಹಂತ ಹಂತವಾಗಿ ಶೇ.30ರಿಂದ ಶೇ.25ಕ್ಕೆ ತಗ್ಗಿಸುವ ತನ್ನ ಹಿಂದಿನ ವರ್ಷದ ಭರವಸೆಯನ್ನು ಜೇಟ್ಲಿಯವರು ಪೂರೈಸುವ ಸಾಧ್ಯತೆಯಿದೆ. ಈ ಪ್ರಕ್ರಿಯೆಗೆ ಅವರು ನಾಳೆಯ ಮುಂಗಡಪತ್ರದಲ್ಲಿ ಚಾಲನೆ ನೀಡಬಹುದೆಂದು ನಿರೀಕ್ಷಿಸಲಾಗಿದೆ.
ಇದರಿಂದಾಗಿ ಕಾರ್ಪೊರೇಟ್ ತೆರಿಗೆ ಆದಾಯ ಯಥಾಸ್ಥಿತಿಯಲ್ಲಿ ಮಂದುವರಿಯುವಂತಾಗಲು ತೆರಿಗೆ ವಿನಾಯಿತಿಗಳ ಹಿಂದೆಗೆದುಕೊಳ್ಳುವಿಕೆಯನ್ನು ಅವರು ಸೂಚಿಸಬಹುದು. ಹೆಚ್ಚುತ್ತಿರುವ ವೆಚ್ಚಗಳನ್ನು ಸರಿದೂಗಿಸಲು ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿತ್ತಸಚಿವರು ಪರೋಕ್ಷ ತೆರಿಗೆ ದರಗಳನ್ನು ಹೆಚ್ಚಿಸುವುದು ಅಥವಾ ಹೊಸ ತೆರಿಗೆಗಳನ್ನು ಹೇರುವುದು ಅಗತ್ಯವಾಗಬಹುದು. ಕಳೆದ ವರ್ಷ ಶೇ.14.5ಕ್ಕೆ ಏರಿಕೆಯಾಗಿರುವ ಸೇವಾ ತೆರಿಗೆಯು ಜಿಎಸ್‌ಟಿಯಲ್ಲಿ ಚಿಂತನೆ ನಡೆಯುತ್ತಿರುವ ಶೇ.18ರ ಮಟ್ಟಕ್ಕೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಇನ್ನೊಂದು ಏರಿಕೆಯನ್ನು ಕಾಣಬಹುದು.
..........
ನನಗೂ ಪರೀಕ್ಷೆ: ಪ್ರಧಾನಿ ಮೋದಿ
ಸೋಮವಾರ ಮಂಡಿಸುವ ಬಜೆಟ್‌ನಲ್ಲಿ ದೇಶದ 125 ಕೋಟಿ ಜನರ ನಿರೀಕ್ಷೆಗಳಿಗೆ ಸ್ಪಂದಿಸುವ ದೊಡ್ಡ ಹೊಣೆಗಾರಿಕೆ ನನ್ನ ಮೇಲಿದೆ. ನಿಜಕ್ಕೂ ಇದು ನನಗೂ ಪರೀಕ್ಷೆ ಇದ್ದಂತೆ. ಇದನ್ನು ಸಮರ್ಥವಾಗಿ ಎದುರಿಸುವ ಆತ್ಮವಿಶ್ವಾಸ ನನ್ನಲ್ಲಿದೆ. (ವಿದ್ಯಾರ್ಥಿಗಳ ಜೊತೆ ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ)







