ಜೆಎನ್‌ಯು ವಿವಾದ: ರಾಹುಲ್,ಕೇಜ್ರಿ,ಯೆಚೂರಿ ವಿರುದ್ಧ ದೇಶದ್ರೋಹ ಪ್ರಕರಣ
ಹೈದರಾಬಾದ್,ಫೆ.28: ಜೆಎನ್‌ಯು ವಿವಾದಕ್ಕೆ ಸಂಬಂಧಿಸಿದಂತೆ ದೇಶದ್ರೋಹ ಪ್ರಕರಣವೊಂದನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ,ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸೇರಿದಂತೆ ಒಂಬತ್ತು ಜನರ ವಿರುದ್ಧ ದಾಖಲಿಸಿಕೊಂಡಿರುವುದಾಗಿ ಇಲ್ಲಿಯ ಸರೂರ ನಗರ ಪೊಲೀಸರು ತಿಳಿಸಿದ್ದಾರೆ.
ವಕೀಲ ಜನಾರ್ದನ ಗೌಡ ಅವರು ಸಲ್ಲಿಸಿರುವ ದೂರಿಗೆ ಸಂಬಂಧಿಸಿದಂತೆ ಹೈದರಾಬಾದ್ ಮಹಾನಗರ ನ್ಯಾಯಾಲಯದ ಆದೇಶದ ಮೇರೆಗೆ ರಾಹುಲ್,ಕೇಜ್ರಿವಾಲ್.ಯೆಚೂರಿ,ಕಾಂಗ್ರೆಸ್ ನಾಯಕರಾದ ಆನಂದ ಶರ್ಮಾ ಮತ್ತು ಅಜಯ ಮಾಕೆನ್, ಸಿಪಿಐ ನಾಯಕ ಡಿ.ರಾಜಾ, ಜೆಡಿಯು ವಕ್ತಾರ ಕೆ.ಸಿ.ತ್ಯಾಗಿ, ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮತ್ತು ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.
ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಮಾ.4ಕ್ಕೆ ನಿಗದಿಗೊಳಿಸಿದೆ.
ಕನ್ಹಯ್ಯ ವಿರುದ್ಧ ದೇಶದ್ರೋಹದ ಆರೋಪದಲ್ಲಿ ದಿಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುವುದು ಗೊತ್ತಿದ್ದರೂ ರಾಹುಲ್ ಮತ್ತು ಇತರ ನಾಯಕರು ಅವರನ್ನು ಬೆಂಬಲಿಸಿರುವುದು ದೇಶದ್ರೋಹಕ್ಕೆ ಸಮವಾಗಿದೆ ಎಂದು ಗೌಡ ತನ್ನ ದೂರಿನಲ್ಲಿ ಹೇಳಿದ್ದಾರೆ.





