2022ರೊಳಗೆ ರೈತರ ಆದಾಯ ದ್ವಿಗುಣ- ಮೋದಿ
ಬರೇಲಿ (ಉತ್ತರಪ್ರದೇಶ), ಫೆ.28: ದೇಶ ಸ್ವಾತಂತ್ರ್ಯ ಗಳಿಸಿದ 75ನೆ ವರ್ಷದ ಸಂ್ರಮಾಚರಣೆ ವೇಳೆಗೆ ಅಂದರೆ 2022ರ ವೇಳೆಗೆ ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸಲು ಕೇಂದ್ರ ಸರಕಾರ ಯೋಜನೆ ರೂಪಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.
ಮೋದಿ ಸರಕಾರದ ನೀತಿಗಳು ಕಾರ್ಪೊರೇಟ್ ನಿರ್ದೇಶಿತ ಎಂಬ ವಿರೋಧ ಪಕ್ಷಗಳ ಟೀಕೆಯನ್ನು ತಳ್ಳಿಹಾಕಿದ ಪ್ರಧಾನಿ, ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳ ಪಟ್ಟಿ ವಿವರಿಸಿದರು. ರೈತರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ರಾಜ್ಯ ಸರಕಾರದ ಮೇಲೆ ವಾಗ್ದಾಳಿ ನಡೆಸಿದರು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಮಂಜೂರು ಮಾಡಿದ ಹಣವನ್ನು ದುರುಪಯೋಗ ಮಾಡಿಕೊಂಡಿದೆ ಎಂದು ಆರೋಪ ಮಾಡಿದರು.
ತಾವು ರೈತಪರ ಎಂದು ಬೆನ್ನು ತಟ್ಟಿಕೊಂಡ ಮೋದಿ, ಕೃಷಿ ಕ್ಷೇತ್ರವನ್ನು ವೈಜ್ಞಾನಿಕವಾಗಿ ಮತ್ತು ಆರ್ಥಿಕವಾಗಿ ಲಾದಾಯಕವಾಗಿ ಮಾಡಲು ಸರಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದು ಸಮರ್ಥಿಸಿಕೊಂಡರು.
ರೈತರಿಗೆ ಇಂದು ಹಲವು ಸವಾಲುಗಳಿವೆ. ಆದರೆ ಈ ಸವಾಲುಗಳನ್ನು ಅವಕಾಶವಾಗಿ ಮಾರ್ಪಡಿಸಿಕೊಳ್ಳಲು ಸಾಧ್ಯವಿದೆ. ರೈತರು ಈ ದೇಶದ ಹೆಮ್ಮೆ ಎಂದು ಬಣ್ಣಿಸಿದರು. ದೇಶದ ದೊಡ್ಡರಾಜ್ಯವಾದ ಉತ್ತರಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಬಾ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ವಿರುದ್ಧದ ವಾಗ್ದಾಳಿಗೆ ವಿಶೇಷ ಅರ್ಥ ಕಲ್ಪಿಸಲಾಗುತ್ತಿದೆ.





