‘ಮೀಸಲಾತಿ ದಲಿತರ ಹಕ್ಕು’

ಕುಂದಾಪುರ, ಫೆ.28: ಭಾರತದಲ್ಲಿ ಎಲ್ಲಿಯವರೆಗೆ ಅಂಬೇಡ್ಕರ್ ಸಿದ್ಧಾಂತ ಜೀವಂತ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಯನ್ನು ಯಾರಿಂದಲೂ ಕಿತ್ತೊಗೆಯಲು ಸಾಧ್ಯವಿಲ್ಲ. ಮೀಸಲಾತಿ ಯಾರ ಭಿಕ್ಷೆಯಲ್ಲ, ಅದು ಭಾರತದ ಆಸ್ತಿ ಹಾಗೂ ಶೋಷಿತರ ಹಕ್ಕು ಎಂದು ದಲಿತ ಚಿಂತಕ ಜಯನ್ ಮಲ್ಪೆ ಹೇಳಿದ್ದಾರೆ.
ಕುಂದಾಪುರದ ಕೆದೂರಿನಲ್ಲಿ ರವಿವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೋಬಳಿ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಯಾವುದನ್ನು ಅಂಬೇಡ್ಕರ್ ಕೊಳಕು ಎಂದರೋ ನಾವು ಅದನ್ನೇ ಎತ್ತಿಕೊಂಡು ಆರಾಧಿಸುತ್ತಿದ್ದೇವೆ. ಹಾಗಾಗಿ ಅಂಬೇಡ್ಕರ್‌ರಿಗೆ ದಲಿತರೇ ನಿಜವಾದ ವಂಚಕರು. ಸ್ವಾಭಿಮಾನದ ಸಿಂಹವಾಗಿದ್ದ ಅಂಬೇಡ್ಕರ್‌ರನ್ನು ದಲಿತರು ಅರ್ಥೈಸಿಕೊಂಡಿದ್ದಿದ್ದರೆ ಈಗಾಗಲೇ ಸಂಸತ್, ಶಾಸನ ಸಭೆಗಳನ್ನು ನಡುಗಿಸುತ್ತಿದ್ದೆವು ಎಂದರು.
ಭಾರತ ಪ್ರಕಾಶಿಸಿ ಜಗತ್ತಿಗೆ ಗುರು ವಾಗಬೇಕಾದರೆ ಮೊದಲು ಇಲ್ಲಿನ ದಲಿತರು ದೇವಸ್ಥಾನದ ಮುಂದೆ ಸಾಲಾಗಿ ನಿಂತು ದೇವರ ದರ್ಶನ ಪಡೆ ಯುವುದನ್ನು ಬಿಟ್ಟು ಗ್ರಂಥಾಲಯದ ಮುಂದೆ ಸಾಲುಗಟ್ಟಿ ನಿಲ್ಲಬೇಕು ಎಂದು ಅವರು ತಿಳಿಸಿದರು.
ಪತ್ರಕರ್ತ ಶಶಿಧರ ಹೆಮ್ಮಾಡಿ ಮಾತ ನಾಡಿ, ಹಿಂದೂ ಸಮಾಜ್ಯೋತ್ಸವದಲ್ಲಿ ದಲಿತರನ್ನು ಉಪಯೋಗಿಸಿಕೊಳ್ಳುವ ಸಂಘಪರಿವಾರ ಚುನಾವಣೆಯಲ್ಲಿ ಕೇವಲ ಮೀಸಲು ಸ್ಥಾನದಲ್ಲಿ ಮಾತ್ರ ದಲಿತರಿಗೆ ಅವಕಾಶ ನೀಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು.
ದಸಂಸ ಕುಂದಾಪುರ ಸಂಚಾಲಕ ರಾಜು ಬೆಟ್ಟಿನಮನೆ ಅಧ್ಯಕ್ಷತೆ ವಹಿಸಿ ದ್ದರು. ಜಿಲ್ಲಾ ಪ್ರಧಾನ ಸಂಚಾಲಕ ಶ್ಯಾಮರಾಜ್ ಬಿರ್ತಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದರು. ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಅರುಣ್ ಬಿ. ನಾಯಕ್, ಕೆದೂರು ಗ್ರಾಪಂ ಅಧ್ಯಕ್ಷ ಸಂಪತ್ ಕುಮಾರ್ ಹೆಗ್ಡೆ, ಮಾಧವ ವಿನೋದ, ಮಂಜುನಾಥ ಗಿಳಿಯಾರು ಮತ್ತಿತರರು ಉಪಸ್ಥಿತರಿದ್ದರು.





