ಸಂಸತ್ತು ಸಿನೆಮಾ ಮಂದಿರವಾಗಿದೆ: ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್

ಭೋಪಾಲ್,ಫೆ.29: ಕೇಂದ್ರದ ಮಾಜಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್ ಸಿಬಲ್‌ರು ಸಂಸತ್‌ನ ವಿದ್ಯಮಾನಗಳನ್ನು ಉಲ್ಲೇಖಿಸುತ್ತಾ ಅದೊಂದು ಥಿಯೆಟರ್ ಆಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಸ್ಮತಿ ಇರಾನಿಯವರ ನಾಟಕೀಯತೆ ಮತ್ತು ಅಲ್ಲಿ ನಡೆಯುತ್ತಿರುವ ಗದ್ದಲಗಳೆಡೆಗೆ ಬೊಟ್ಟು ಮಾಡಿ ಹೀಗೆ ಅವರು ಕಟುವಾಗಿ ವಿಮರ್ಶಿಸಿದ್ದಾರೆ.
ಮಧ್ಯಪ್ರದೇಶದ ರಾಜಧಾನಿಗೆ "ಸಂವಿಧಾನ ಹಾಗೂ ದೇಶಭಕ್ತಿ" ಎಂಬ ವಿಷಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿಲು ಬಂದಿದ್ದ ಅವರು ನಂತರ ಕಾಂಗ್ರೆಸ್ ಕಚೇರಿಗೆ ತೆರಳಿ ಸುದ್ದಿಗಾರರೊಂದಿಗೆ ಮಾತಾಡಿದರು, "ನಾವು ಮೊದಲು ಸಿನೆಮಾಗೃಹಗಳಲ್ಲಿ ಏನನ್ನು ನೋಡುತ್ತಿದ್ದೆವು. ಅದನ್ನೀಗ ಪಾರ್ಲಿಮೆಂಟ್‌ನಲ್ಲಿಯೇ ನೋಡುತ್ತಿದ್ದೇವೆ. ಆದರೆ ಪಾರ್ಲಿಮೆಂಟ್ ದೇಶ ಮುನ್ನಡೆಯುವ ವಿಷಯಗಳಲ್ಲಿ ಚರ್ಚೆಯಾಗಬೇಕಾದ ಸ್ಥಳವಾಗಿದೆ" ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇಂದು ಬಿಜೆಪಿ ಮತ್ತು ಆರೆಸ್ಸೆಸ್‌ನ ಅಜೆಂಡಾಗಳನ್ನು ಜಾರಿಗೊಳಿಸುವುದರಲ್ಲಿ ನಿರತರಾಗಿದ್ದಾರೆ. ಈಗ ಅವರು ದೇಶದ ಪ್ರಧಾನಿಯಂತೆ ಕೆಲಸ ಮಾಡುತ್ತಿಲ್ಲ. ಸಂಘ ಪ್ರಚಾರಕನಂತೆ ಕೆಲಸ ಮಾಡುತ್ತಿದ್ದಾರೆ ಎಂದು ಕಟಕಿಯಾಡಿದ್ದಾರೆ.
"ಮೋದಿ ದೇಶವನ್ನು ಪ್ರಧಾನಿಯ ದೃಷ್ಟಿಯಲ್ಲಿ ನೋಡುತ್ತಿಲ್ಲ. ಈ ವಿಷಯದಲ್ಲಿ ನನಗೆ ಆತಂಕವಿದೆ" ಎಂದು ಕುಟುಕಿದ್ದಾರೆ. ಕಾಂಗ್ರೆಸ್ ವಿರುದ್ಧ ನಡೆಯುತ್ತಿರುವ ಮಾತಿನ ಧಾಳಿಯ ಕುರಿತು ಪ್ರತಿಕ್ರಿಯಿಸಿದ ಅವರು ದೇಶ ಮುಂದುವರಿಯಬೇಕಿದ್ದರೆ ನಾವು ಸಂವಿಧಾನವನ್ನು ಒಪ್ಪಿಕೊಳ್ಳಬೇಕಾಗಿದೆ ಎಂದಿದ್ದಾರೆ. ಸುಖಾಸುಮ್ಮನೆ ಹೇಳಿಕೆ ನೀಡುವುದನ್ನು ನಿಲ್ಲಿಸಿ ಕೇವಲ ರಾಜಕೀಯ ಲಾಭವನ್ನು ನೋಡದೆ, ದೇಶದ ಹಿತಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.
ಜೆಎನ್‌ಯು ವಿಚಾರದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ "ಅಲ್ಲಿ ಏನು ನಡೆದಿತ್ತೋ ಅದು ಸಂವಿಧಾನದ ಪ್ರಕಾರ ನಡೆದಿತ್ತೇ ಇಲ್ಲವೇ ಎಂಬುದನ್ನು ನ್ಯಾಯಾಲಯ ನಿರ್ಧರಿಸುತ್ತದೆ. ಆದರೆ ನಾನು ವಿಶ್ವವಿದ್ಯಾನಿಲಯಕ್ಕೆ ಪೊಲೀಸರನ್ನು ಛೂ ಬಿಡುವುದು ಸರಿಯಲ್ಲ ಎಂದು ಹೇಳಬಲ್ಲೆ" ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.
ಒಂದು ವೇಳೆ ವಿದ್ಯಾರ್ಥಿಗಳು ತಮ್ಮ ಮಾತುಗಳನ್ನು ಹೇಳಬಾರದೆಂದಿದ್ದರೆ, ತಮ್ಮ ವಿಚಾರವನ್ನು ವ್ಯಕ್ತಪಡಿಸಬಾರದೆಂದಿದ್ದರೆ ವಿಶ್ವವಿದ್ಯಾನಿಲಯಗಳದ್ದೇ ಅಗತ್ಯವಿಲ್ಲ. ವಿಶ್ವವಿದ್ಯಾನಿಲಯಗಳ ಅರ್ಥವೇ ವಿದ್ಯಾರ್ಥಿಗಳ ಮೂಲಕ ತಮ್ಮ ಚಿಂತನೆಗಳನ್ನು ಎಲ್ಲರ ಮುಂದೆ ಪ್ರಕಟಿಸುವುದು ಎಂದಾಗಿದೆ. ಒಂದು ವೇಳೆ ಅದು ನಿಮಗೆ ಇಷ್ಟವಿಲ್ಲದ ವಿಚಾರವೂ ಆಗಿರಬಹುದು.
ಮಧ್ಯಪ್ರದೇಶದ ಬಹುಚರ್ಚಿತ ವ್ಯಾಪಂ ಹಗರಣದ ಕುರಿತು ಸಿಬಲ್‌ರನ್ನು ಪ್ರಶ್ನಿಸಿದಾಗ ಈ ಹಗರಣ ಸಿಬಿಐ ತನಿಖೆಗೊಳಗಾಗಬಹುದೆಂದು ತನಗನಿಸುತ್ತಿಲ್ಲ ಎಂದು ಹೇಳಿದರು. ಒಂದುವೇಳೆ ತನಿಖೆ ನಡೆಯುತ್ತಿದೆ ಎಂದಾದರೆ ಈವರೆಗೆ ಅದಕ್ಕೆ ಸಲ್ಲಿಸಲಾದ ದಾಖಲೆಗಳ ಆಧಾರದಲ್ಲಿ ಯಾವುದೇ ಕ್ರಮ ಜರಗಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.
ಸಿಬಿಐಗೆ ದಾಖಲೆ ಹಾಗೂ ಟೇಪ್‌ಗಳನ್ನು ನೀಡಲಾಗಿದೆ. ಅದರಲ್ಲಿ ಹಲವುಮಂದಿಯ ಹೆಸರು ಇವೆ. ಅವರಲ್ಲಿ ಯಾರ ವಿರುದ್ಧವೂ ಈವರೆಗೂ ಕ್ರಮ ಜರಗಿಲ್ಲ. ಯಾರನ್ನೂ ಬಂಧಿಸಲಾಗಿಲ್ಲ ಎಂದ ಅವರು"2019ರ ನಂತರ ಸಿಬಿಐ ಹೇಗೆ ಕೆಲಸ ಮಾಡುತ್ತಿದೆ ಎಂದು ನೋಡಿರಿ. ಅದು ಆಗ ಸಂಪೂರ್ಣವಾಗಿ ಸರಕಾರವನ್ನು ರಕ್ಷಿಸುವ ಕೆಲಸದಲ್ಲಿ ನಿರತವಾಗಿರುತ್ತದೆ" ಎಂದು ಸಿಬಿಐಯ ಕಾರ್ಯಶೈಲಿಯನ್ನು ಸಿಬಲ್ ಟೀಕಿಸಿದ್ದಾರೆ.







