ಕಾಟಿಪಳ್ಳ, ಕೃಷ್ಣಾಪುರ, ಚೊಕ್ಕಬೆಟ್ಟು ಪ್ರದೇಶಗಳಿಗೆ ನೀರಿಲ್ಲ: ಡಿಸಿ ಆದೇಶಕ್ಕೆ ಮನ್ನಣೆ ನೀಡದ ಮನಪಾ ಆಯುಕ್ತರು

ಮಂಗಳೂರು, ಫೆ.29: ಜಿಲ್ಲೆಯ ವಿವಿಧ ಪ್ರದೇಶಗಳಿಗೆ ನೀರಿನ ಸಮಸ್ಯೆ ತಲೆ ದೋರದಂತೆ ಕ್ರಮ ಕೈಗೊಳ್ಳಿ ಎಂಬ ಜಿಲ್ಲಾಧಿಕಾರಿಗಳ ಆದೇಶದ ಹೊರತಾಗಿಯೂ ಕಾಟಿಪಳ್ಳ, ಕೃಷ್ಣಾಪುರ ಹಾಗೂ ಚೊಕ್ಕಬೆಟ್ಟು ಪ್ರದೇಶಗಳ ಜನರು ತಿಂಗಳಿಂದೀಚೆಗೆ ದಿನದಿಂದ ದಿನಕ್ಕೆ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಈ ಮೂಲಕ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಸ್ತುತ ಜಿಲ್ಲಾಧಿಕಾರಿಯವರ ಆದೇಶಕ್ಕೆ ಮನ್ನಣೆ ನೀಡುತ್ತಿಲ್ಲ ಎಂಬ ಆರೋಪವೂ ಸ್ಥಳೀಯವಾಗಿ ಕೇಳಿಬಂದಿದೆ.
ಕಾಟಿಪಳ್ಳ, ಕೃಷ್ಣಾಪುರ ಹಾಗೂ ಚೊಕ್ಕಬೆಟ್ಟು ಈ ಪ್ರದೇಶಗಳ ವ್ಯಾಪ್ತಿಯ ಜನರಿಗೆ ಒಂದು ತಿಂಗಳಿಂದ ಕೇವಲ 14 ದಿನಗಳು ಮಾತ್ರ ನೀರು ಪೂರೈಕೆಯಾಗಿದ್ದು, 15 ದಿನಗಳ ಕಾಲ ನೀರನ್ನು ಸ್ಥಗಿತಗೊಳಿಸಲಾಗಿದೆ. ಈ ಪ್ರದೇಶಗಳಿಗೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಅಂದರೆ ಸುಮಾರು 2ರಿಂದ 3 ಗಂಟೆಗಳ ಕಾಲ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದ್ದರೂ ಅದು ಕೂಡ ಸಮರ್ಪಕವಾಗಿರದೆ ದಿನ ಬಿಟ್ಟು ದಿನಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದಾಗಿ ನಾಗರಿಕರು ನಿರಂತರವಾಗಿ ನೀರಿನ ಬವಣೆಯನ್ನು ಎದುರಿಸುವಂತಾಗಿದೆ.
ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಕಾರ್ಪೊರೇಟರ್ ಅಯಾಝ್, ಈ ಪ್ರದೇಶಗಳಿಗೆ ಫೆಬ್ರವರಿಯಲ್ಲಿ 14 ದಿನಗಳು ಮಾತ್ರ ನೀರಿನ ಪೂರೈಕೆಯಾಗಿದೆ. ಅದರಲ್ಲೂ ನೀರು ಪೂರೈಕೆಯಾಗುವ ಸಮಯದಲ್ಲಿ ವಿದ್ಯುತ್ ಕೈಕೊಟ್ಟರೆ ಅಂದು ನೀರಿಲ್ಲ. ಈ ಬಗ್ಗೆ ಪಂಪ್‌ಹೌಸ್‌ನವರಿಗೆ ವಿಚಾರಿಸಿದರೂ ಅವರು ಕೂಡ ಸಿದ್ಧ ಉತ್ತರವನ್ನೇ ನೀಡುತ್ತಾರೆ.
ಒಮ್ಮೆ ಕರೆಂಟ್ ಇಲ್ಲ ಅಂದರೆ, ಮತ್ತೊಮ್ಮೆ ಪೈಪ್‌ಲೈನ್‌ನಲ್ಲಿ ಲೀಕೇಜ್ ಇದೆ ಅಂತಾರೆ. ಮತ್ತೊಮ್ಮೆ ಗೇಟ್‌ವಾಲ್ ರಿಪೇರಿಯಲ್ಲಿದೆ ಎಂಬ ಸಬೂಬು ನೀಡುತ್ತಾರೆ. ಸುಮಾರು 20 ವರ್ಷಗಳ ಹಿಂದೆ ಅಳವಡಿಸಲಾಗಿದ್ದ ಪೈಪ್‌ಲೈನ್ ಪದೇ ಪದೇ ಒಡೆದು ಸೋರಿಕೆಯಾಗುತ್ತಿದ್ದರೂ ಅಧಿಕಾರಿಗಳಿಗೆ ಹೊಸ ಪೈಪ್‌ಲೈನ್ ಅಳವಡಿಸಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಅಯಾಝ್ ಪ್ರಶ್ನಿಸಿದ್ದಾರೆ.
ನೀರು ಪೂರೈಕೆಯಾಗುವ 2-3 ಗಂಟೆಗಳಲ್ಲಿ ವಿದ್ಯುತ್ ಕೈಕೊಟ್ಟರೆ ಅಂದು ಈ ಮೂರೂ ಪ್ರದೇಶಗಳಿಗೆ ನೀರಿಲ್ಲ. ಮರು ದಿನ ನೀರು ಬರುತ್ತದೆ ಎಂದು ನಾಗರಿಕರೂ ಕಾದರೂ ಇನ್ನೊಂದು ಸಮಸ್ಯೆ ಎದುರಾಗುತ್ತದೆ. ಕಳೆದ 10 ದಿನಗಳಿಂದ ಒಂದಲ್ಲ ಒಂದು ಸಮಸ್ಯೆಗಳು ಉದ್ಭವಿಸುತ್ತಲೇ ಇದೆ.
ರವಿವಾರ ನೀರು ಪೂರೈಕೆಯಾಗಿದ್ದರೂ ಇಂದು ಕುಳಾಯಿಯಲ್ಲಿ ಪೈಪ್ ಒಡೆದು ನೀರು ಸ್ಥಗಿತಗೊಂಡಿದೆ. ಈ ಬಗ್ಗೆ ಪ್ರತಿ ದಿನ ನಾಗರಿಕರು ನನ್ನಲ್ಲಿ ಬಂದು ನೀರಿನ ಸಮಸ್ಯೆಯ ಬಗ್ಗೆ ಅವಲತ್ತು ತೋಡಿಕೊಳ್ಳುತ್ತಿದ್ದಾರೆ. ಪದೇ ಪದೇ ಪುನರಾವರ್ತಿಸುವ ಇಂತಹ ಸಮಸ್ಯೆಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ಸಾಧ್ಯವಿಲ್ಲವೇ? ಜನರು ನೀರಿಲ್ಲದೆ ಹೇಗೆ ಬದುಕಬೇಕು ಎಂದು ಅಯಾಝ್ ಪ್ರಶ್ನಿಸಿದ್ದಾರೆ.
20 ವರ್ಷಗಳಿಗೂ ಹಿಂದೆ ಅಳವಡಿಸಲಾಗಿದ್ದ ಪೈಪ್‌ಲೈನ್‌ಗಳನ್ನು ತೆರವುಗೊಳಿಸಿ ಹೊಸ ಪೈಪ್‌ಲೈನ್‌ನ್ನು ಅಳವಡಿಸಬೇಕು. ಪದೇ ಪದೇ ಗೇಟ್‌ವಾಲ್ ರಿಪೇರಿ, ಕರೆಂಟ್ ಇಲ್ಲದಿರುವುದು ಮೊದಲಾದ ಸಮಸ್ಯೆಗಳಿಗೆ ಪರ್ಯಾಯ ಕ್ರಮ ಕೈಗೊಳ್ಳಬೇಕು. ಬೆಳಗ್ಗೆ ಕೇವಲ 2 ಅಥವಾ 3 ಗಂಟೆಗಳು ಮಾತ್ರ ನೀರು ಪೂರೈಕೆಯಾಗುತ್ತಿದ್ದು, ಅದನ್ನಾದರೂ ಸಮರ್ಪಕವಾಗಿ ಪೂರೈಸಿ ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.







