ಚಾಲಕನ ನಿಯಂತ್ರಣ ತಪ್ಪಿದ ರೋಡ್‌ರೋಲರ್ ಸರಣಿ ಅಪಘಾತದಲ್ಲಿ 4 ವಾಹನಗಳಿಗೆ ಹಾನಿ
ಮಂಗಳೂರು, ಫೆ.29: ರೋಡ್ ರೋಲರ್‌ವೊಂದು ಚಾಲಕ ನಿಯಂತ್ರಣ ಕಳೆದುಕೊಂಡು ನಡೆದ ಅಪಘಾತದಲ್ಲಿ ಒಂದು ಕಾರು ಸಹಿತ ಮೂರು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿರುವ ಘಟನೆ ನಗರದ ವೆಲೆನ್ಶಿಯಾ ವೃತ್ತದ ಬಳಿ ಇಂದು ಸುಮಾರು 11 ಗಂಟೆಗೆ ಸಂಭವಿಸಿದೆ.
ಅಪಘಾತದಲ್ಲಿ ಹುಂಡೈಯ ಒಂದು ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದರೆ, ಆ್ಯಕ್ಟಿವಾ ವಾಹನವೊಂದು ರೋಡ್‌ರೋಲರ್‌ನಡಿಗೆ ಸಿಲುಕಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಕೂಟಿ ಮತ್ತು ಜುಪಿಟರ್ ವಾಹನಗಳಿಗೆ ಸಣ್ಣ ಪುಟ್ಟ ಹಾನಿಗಳಾಗಿವೆ.
ಬಾದಾಮಿ ಮೂಲದ ಮಲ್ಲಪ್ಪ ಎಂಬವರಿಗೆ ವೆಲೆನ್ಶಿಯಾ ವೃತ್ತದ ಬಳಿ ನಿಲ್ಲಿಸಿದ್ದ ರೋಡ್ ರೋಲರ್‌ನ್ನು ಕಂಕನಾಡಿ ಬಳಿಯ ಫಾದರ್ ಮುಲ್ಲರ್ ಎದುರಿನ ರಸ್ತೆ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಚಲಾಯಿಸಿಕೊಂಡು ಹೋಗಬೇಕಾಗಿತ್ತು. ಈ ಸಂದರ್ಭದಲ್ಲಿ ಸರ್ಕಲ್‌ನಿಂದ ತಿರುವು ಪಡೆಯುತ್ತಿದ್ದಾಗ ರೋಡ್‌ರೋಲರ್‌ನ ಬ್ರೇಕ್‌ಫೇಲ್ ಆದ ಪರಿಣಾಮ ಚಾಲಕ ವಾಹನದ ನಿಯಂತ್ರಣವನ್ನು ಕಳೆದು ಕೆನರಾ ಬ್ಯಾಂಕ್ ಎದುರು ಪಾರ್ಕ್ ಮಾಡಲಾಗಿದ್ದ ವಾಹನಗಳಿಗೆ ಢಿಕ್ಕಿ ಹೊಡೆದು ಬ್ಯಾಂಕ್‌ನ ಪ್ರವೇಶದ್ವಾರದ ಮೆಟ್ಟಿಲಿಗೆ ಬಡಿದು ನಿಂತಿದೆ.
ಇಂದು ಸೋಮವಾರವಾಗಿದ್ದ ಬ್ಯಾಂಕಿಗೆ ಆಗಮಿಸುವವರ ಸಂಖ್ಯೆ ಹೆಚ್ಚಿದ್ದರೂ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.





