ಉತ್ತರ ಪ್ರದೇಶದಲ್ಲಿ ಪಾನಮತ್ತ ಪತಿ ಗೆಳೆಯನೊಂದಿಗೆ ಸೇರಿ ಪತ್ನಿಯನ್ನೆ ಸಾಮೂಹಿಕ ಅತ್ಯಾಚಾರಗೈದ!

ಲಕ್ನೊ,ಫೆ.29:ಉತ್ತರ ಪ್ರದೇಶದ ರಾಜಧಾನಿ ಲಕ್ನೊದಲ್ಲಿ ಕಲಿಯುಗ ಪತಿಯೊಬ್ಬ ಕುಡಿದ ಮತ್ತಿನಲ್ಲಿ ತನ್ನದೆ ಪತ್ನಿಯ ಪಾಲಿಗೆ ರಾಕ್ಷಸನಾದ ಘಟನೆ ವರದಿಯಾಗಿದೆ. ತನ್ನ ಗೆಳೆಯನ ಜೊತೆ ಸೇರಿ ಪತ್ನಿಯನ್ನೇ ಸಾಮೂಹಿಕ ಅತ್ಯಾಚಾರಕ್ಕೆ ಗುರಿಪಡಿಸಿದ್ದಾನೆ. ಮಾತ್ರವಲ್ಲ ದಾರುಣವಾಗಿ ಥಳಿಸಿದ್ದಾನೆ. ಪೀಡಿತ ಮಹಿಳೆಯನ್ನು ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದಾಗ ಪೊಲೀಸರು ಗದರಿಸಿ ಠಾಣೆಯಿಂದಲೇ ಓಡಿಸಿದ್ದಾರೆ.
ಮಾಲಾದ ಪೊಲೀಸ್ ಠಾಣೆ ವ್ಯಾಪ್ತಿಯ ಝಿಂದಾನಾ ಗ್ರಾಮದಲ್ಲಿ ಶನಿವಾರದಂದು ಈ ಅಮಾನವೀಯ ಘಟನೆ ನಡೆದಿದ್ದು ಅಂದು ಶಿವರಾಜ್ ಎಂಬಾತ ತನ್ನ ಗೆಳೆಯ ರಾಮ್‌ಭಜನ್ ಎಂಬಾತನೊಂದಿಗೆ ಸೇರಿ ಶರಾಬು ಕುಡಿದಿದ್ದಾನೆ. ಅದೇ ಅಮಲಿನಲ್ಲಿ ಗೆಳೆಯನನ್ನು ತನ್ನಮನೆಗೆ ಕರೆದು ಕೊಂಡು ಬಂದಿದ್ದಾನೆ. ತನ್ನೆರಡು ಮಕ್ಕಳನ್ನುಒಂದು ಕೋಣೆಯಲ್ಲಿ ಕೂಡಿ ಹಾಕಿ ಪತ್ನಿಯೊಂದಿಗೆ ಬಲವಂತದಿಂದ ಲೈಂಗಿಕ ತೀಟೆ ತೀರಿಸಿದ್ದಲ್ಲದೆ ಅವಳನ್ನು ಗೆಳೆಯನಿಗೂ ಒಪ್ಪಿಸಿದ್ದಾನೆ. ಸುಮಾರು ಮೂರುಗಂಟೆಗಳ ಕಾಲ ಇವರಿಬ್ಬರು ಮಹಿಳೆಯನ್ನು ನಿರಂತರವಾಗಿ ಪೀಡಿಸಿದ್ದಲ್ಲದೆ ದಾರುಣವಾಗಿ ಥಳಿಸಿದ್ದಾರೆ. ಮಹಿಳೆ ಪೊಲೀಸರ ಬಳಿಗೆ ದೂರು ನೀಡಲು ಹೋದಾಗ ದೂರು ಸ್ವೀಕರಿಸುವ ಬದಲಾಗಿ ಪೊಲೀಸರು ಅವಳನ್ನೇ ಠಾಣೆಯಿಂದ ಓಡಿಸಿದ್ದಾರೆ. ಇದನ್ನರಿತ ಗ್ರಾಮ ನಿವಾಸಿಗಳು ಪ್ರತಿಭಟನೆಗಿಳಿದು ಆಕ್ರೋಶ ವ್ಯಕ್ತಪಡಿಸತೊಡಗಿದಾಗ ಪೊಲೀಸರು ಕಿವಿನೆಟ್ಟಗಾಗಿತ್ತು. ಆನಂತರ ಪೊಲೀಸರು ಆರೋಪಿಗಳನ್ನು ಠಾಣೆಗೆ ಕರೆಸಿಕೊಂಡರೆನ್ನೆಲಾಗಿದೆ. ಅಷ್ಟರಲ್ಲಿ ಅಲ್ಲಿ ನೆರೆದಿದ್ದ ಜನರು ಆರೋಪಿಗಳ ಮೇಲೆ ಮುಗಿಬಿದ್ದು ಥಳಿಸಿದ್ದಾರೆಂದು ವರದಿಯಾಗಿದೆ.





