ಕ್ಯಾಚ್ ನ್ಯೂಸ್ ಸಂಪಾದಕಿ ಶೋಮಾ ಚೌಧುರಿ ಅವರಿಗೆ ಹಠಾತ್ ಗೇಟ್ ಪಾಸ್

ಹೊಸದಿಲ್ಲಿ , ಫೆ. 29 : ಎಂಟು ತಿಂಗಳ ಹಿಂದೆ ಪ್ರಾರಂಭವಾದ ರಾಜಸ್ಥಾನ್ ಪತ್ರಿಕಾ ಬಳಗದ ಕ್ಯಾಚ್ ನ್ಯೂಸ್ ಸುದ್ದಿ ವೆಬ್ ಸೈಟ್ ನ ಪ್ರಧಾನ ಸಂಪಾದಕಿ ಶೋಮಾ ಚೌಧುರಿ ಅವರನ್ನು ಹುದ್ದೆ ಬಿಡುವಂತೆ ವೆಬ್ ಸೈಟ್ ನ ಮಾಲಕರು ಹೇಳಿರುವುದು ವರದಿಯಾಗಿದೆ. ಸೋಮವಾರ ತನ್ನ ಸಂಪಾದಕೀಯ ತಂಡಕ್ಕೆ ಶೋಮಾ ಇ ಮೇಲ್ ಮೂಲಕ ಈ ವಿಷಯ ತಿಳಿಸಿದ್ದಾರೆ.
" ತೀರಾ ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ , ಫೆಬ್ರವರಿ 27 ರಂದು ನನ್ನನ್ನು ಜೈಪುರಕ್ಕೆ ಕರೆದ ಸಮೂಹದ ಆರ್ಥಿಕ ನಿರ್ದೇಶಕರು ವೆಬ್ ಸೈಟ್ ಪ್ರಾರಂಭವಾಗಿ ಯಶಸ್ವಿಯಾಗಿ ನಡೆಯುತ್ತಿರುವುದರಿಂದ ನನ್ನನ್ನು ಪ್ರಧಾನ ಸಂಪಾದಕಿಯಾಗಿ ಮುಂದುವರಿಸಲು ಬಯಸುತ್ತಿಲ್ಲ. ಹಾಗಾಗಿ ಫೆಬ್ರವರಿ 29 ರಿಂದ ಕಚೇರಿಗೆ ಬರುವುದು ಬೇಡ ಎಂದು ಹೇಳಿದ್ದಾರೆ "ಎಂದು ಶೋಮ ಹೇಳಿದ್ದಾರೆ.
ಕ್ಯಾಚ್ ನ್ಯೂಸ್ ತನ್ನ ವಿಶೇಷ ವರದಿಗಳು, ಲೇಖನಗಳು ಹಾಗು ಚಿತ್ರ ಸಂಗ್ರಹಗಳಿಂದ ಬಹಳ ಬೇಗ ಜನಪ್ರಿಯತೆ ಪಡೆದಿತ್ತು. ಕೇಂದ್ರ ಸರಕಾರದ ಧೋರಣೆಗಳನ್ನು ಟೀಕಿಸಿ ಲೇಖನಗಳೂ ಇದರಲ್ಲಿ ಪ್ರಕಟವಾಗುತ್ತಿದ್ದವು. ಆದರೆ ಶೋಮಾ ಅವರನ್ನು ಯಾವ ಕಾರಣಕ್ಕಾಗಿ ಹಠಾತ್ತನೇ ತೆಗೆಯಲಾಗಿದೆ ಎಂಬುದು ಖಚಿತಗೊಂಡಿಲ್ಲ.
ಅವರು ಈ ಹಿಂದೆ ತೆಹೆಲ್ಕಾ ನಿಯತಕಾಲಿಕದ ವ್ಯವಸ್ಥಾಪಕ ಸಂಪಾದಕಿಯಾಗಿದ್ದರು. ಅದರ ಸಂಪಾದಕ ತರುಣ್ ತೇಜ್ಪಾಲ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಬಂದು ಬಂಧಿತರಾದ ಮೇಲೆ ಅವರು ರಾಜೀನಾಮೆ ನೀಡಿದ್ದರು.







