ಕಾಶ್ಮೀರಿ ಮುಸ್ಲಿಮನಾಗಿದ್ದರಿಂದ ಗೀಲಾನಿಯನ್ನು ಯಾರೂ ಬೆಂಬಲಿಸುತ್ತಿಲ್ಲ : ಕುಟುಂಬದ ಅಳಲು

ಹೊಸದಿಲ್ಲಿ , ಫೆ. 29: ಪ್ರೊ. ಎಸ್ ಎ ಆರ್ ಗೀಲಾನಿ ಅವರು ಕಾಶ್ಮೀರಿ ಮುಸ್ಲಿಮರಾಗಿರುವುದರಿಂದ ಯಾರೂ ಅವರನ್ನು ಬೆಂಬಲಿಸುತ್ತಿಲ್ಲ ಎಂದು ಅವರ ಕುಟುಂಬ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ. ಸಂಸತ್ತು ದಾಳಿ ಪ್ರಕರಣದ ಅಪರಾಧಿ ಅಫ಼್ಝಲ್ ಗುರು ಕುರಿತು ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಗೀಲಾನಿ ಅವರನ್ನು ಫೆ 15 ರಂದು ಪೊಲೀಸರು ಬಂಧಿಸಿದ್ದು ಈಗ ಅವರು ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
" ಎರಡೂ ಪ್ರಕರಣಗಳು ( ಜೆಎನ್ಯು ಹಾಗು ಗೀಲಾನಿ ) ಒಂದೇ ಸ್ವರೂಪದ್ದಾಗಿದ್ದರೂ ಯಾರೂ ಗೀಲಾನಿಯನ್ನು ಬೆಂಬಲಿಸಿ ಪ್ರತಿಭಟನೆ ನಡೆಸುತ್ತಿಲ್ಲ. ಅವರು ಕಾಶ್ಮೀರಿ ಮುಸ್ಲಿಮರಾಗಿರುವುದೇ ಇದಕ್ಕೆ ಕಾರಣ. ಅವರು ಮಾಡದ ಅಪರಾಧಕ್ಕಾಗಿ ಸರಕಾರ ಅವರನ್ನು ಬಂಧಿಸಬಹುದು. ಅದನ್ನು ಯಾರೂ ಪ್ರಶ್ನಿಸುವುದಿಲ್ಲ " ಎಂದು ಗೀಲಾನಿಯ ಸೋದರ ಬಿಸ್ಮಿಲ್ಲಃ ಹೇಳಿದ್ದಾರೆ.
" ಅವರಿಗೆ ಬೆಂಬಲ ವ್ಯಕ್ತಪಡಿಸಿದರೆ ಸರಕಾರದಿಂದ ಕ್ರಮ ಎದುರಿಸಬೇಕಾಗುತ್ತದೆ ಎಂದು ಹೆದರಿ ಯಾರೂ ಬೆಂಬಲಿಸಲು ಮುಂದೆ ಬರುತ್ತಿಲ್ಲ " ಎಂದು ಗೀಲಾನಿಯ ಮಗ ಆತಿಫ್ ಹೇಳಿದ್ದಾರೆ. " ಅವರ ಸ್ನೇಹಿತರು ಕಾಲ್ ಮಾಡಿ ಕೇಳುತ್ತಿದ್ದಾರೆ ಮತ್ತು ಒಂದೆರಡು ವರದಿಗಳು ಪ್ರಕಟವಾಗಿವೆ. ಅಷ್ಟೇ " ಎಂದು ಅವರ ಸೋದರಿ ಹೇಳಿದರು .
"ಅಫ಼್ಝಲ್ ಗುರು ಗಲ್ಲಿನ ಬಗ್ಗೆ ಇಡೀ ದೇಶದಲ್ಲಿ ಪ್ರತಿಭಾತನೆಗಳಾಗಿವೆ . ಕಳೆದ ವರ್ಷ ಸುಪ್ರೀಂ ಕೋರ್ಟ್ ನಲ್ಲೆ ಕಾನೂನು ವಿದ್ಯಾರ್ಥಿಗಳು ಮೆರವಣಿಗೆ ಮಾಡಿದ್ದಾರೆ. ಆಗ ಯಾರನ್ನೂ ಬಂಧಿಸಿಲ್ಲ. ಈಗ ಯಾಕೆ ಹೀಗೆ " ಎಂದು ಅವರು ಪ್ರಶ್ನಿಸುತ್ತಾರೆ.
" ನನ್ನ ಫೋಟೋ ತೆಗೆಯಬೇಡಿ. ಇಲ್ಲದಿದ್ದರೆ ನನಗೂ ಉಮರ್ ಖಾಲಿದ್ ಸೋದರಿಗೆ ಬಂದ ಹಾಗೆ ಬೆದರಿಕೆ ಬರಲು ಪ್ರಾರಂಭವಾಗುತ್ತದೆ " ಎಂದು ಆಕೆ ತಡೆದರು .







