ಬಂಗಾಳದ ಹಳ್ಳಿಹುಡುಗಿಗೆ ನಾಸಾದ ಅಗ್ರ ಗೌರವ

ಕೊಲ್ಕತ್ತಾ: ಇದು ಹಳ್ಳಿಹುಡುಗಿಯ ವಿಶಿಷ್ಟ ಸಾಧನೆಯ ಕಥೆ. ಕೊಲ್ಕತ್ತಾದಿಂದ 30 ಕಿಲೋಮೀಟರ್ ದೂರದ ಹಳ್ಳಿಯ 12ನೇ ತರಗತಿ ವಿದ್ಯಾರ್ಥಿನಿ ಸಾತಪರ್ಣ ಮುಖರ್ಜಿ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ನೀಡುವ ಪ್ರತಿಷ್ಠಿತ ಗೊಡ್ಡಾರ್ಡ್ ಇಂಟರ್ನ್‌ಶಿಪ್ ಯೋಜನೆಗೆ ಆಯ್ಕೆಯಾಗಿದ್ದಾರೆ. ಈ ಪ್ರತಿಷ್ಠಿತ ಶಿಷ್ಯವೇತನಕ್ಕೆ ವಿಶ್ವದಿಂದ ಆಯ್ಕೆಯಾದ ಐದು ಮಂದಿಯಲ್ಲಿ ಮುಖರ್ಜಿ ಕೂಡಾ ಒಬ್ಬರು.
ಈ ಕಾರ್ಯಾಕ್ರಮದಡಿ ನಾಸಾದ ಜಿಐಎಸ್‌ಎಸ್ ಘಟಕ ವಿಶ್ವದ ಐದು ಮಂದಿ ಅಸಾಧಾರಣ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಅವರ ಮುಂದಿನ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸುತ್ತದೆ.
ಕಮುದುನಿ ಪ್ರದೇಶದ ಮಾಧ್ಯಮಗ್ರಾಮದ ಸೆಂಟ್ ಜೂಡ್ಸ್ ಶಾಲೆಯಲ್ಲಿ 12ನೇ ತರಗತಿ ಬೋರ್ಡ್ ಪರೀಕ್ಷೆ ಬರೆಯಲಿರುವ ಮುಖರ್ಜಿ, ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಪದವಿ ವ್ಯಾಸಾಂಗಕ್ಕೆ ಅರ್ಹತೆ ಪಡೆದಿದ್ದಾಳೆ. ಆ ಬಳಿಕ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಪದವಿಯನ್ನು ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಲಂಡನ್‌ನ ಆಸ್ಟ್ರೋಬಯಾಲಜಿ ಸೆಂಟರ್‌ನಲ್ಲಿ ಪಡೆಯಲಿದ್ದಾರೆ.
"ಸಾಮಾಜಿಕ ಜಾಲತಾಣದಲ್ಲಿ ನನಗೆ ಕೆಲ ವಿಜ್ಞಾನಿಗಳು ಸೇರಿದಂತೆ ಹಲವು ಮಂದಿ ಸ್ನೇಹಿತರಿದ್ದಾರೆ. ಒಂದು ದಿನ ಕಪ್ಪುರಂದ್ರ ಸಿದ್ಧಾಂತದ ಬಗ್ಗೆ ನನ್ನ ಯೋಚನೆಗಳನ್ನು ತಾಣದಲ್ಲಿ ಹಂಚಿಕೊಂಡೆ. ಒಬ್ಬ ಸದಸ್ಯರು ನನಗೆ ನಾಸಾದ ಅಧಿಕೃತ ವೆಬ್‌ಸೈಟ್ ವಿಳಾಸ ನೀಡಿ, ಈ ಅಂಶಗಳನ್ನು ಅಲ್ಲಿ ಪ್ರಸ್ತುತಪಡಿಸುವಂತೆ ಸಲಹೆ ಮಾಡಿದರು. ಹಾಗೆ ಮಾಡಿದೆ" ಎಂದು ಸಾತಪರ್ಣ ವಿವರಿಸಿದರು. ಈಕೆಯ ಸಿದ್ಧಾಂತವನ್ನು ಟೈಮ್ ಮೆಷಿನ್ ಸಿದ್ಧಪಡಿಸಲು ಬಳಸಲಾಗಿದ್ದು, ಇದಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ನಾಸಾದಲ್ಲಿ ನಾನು ಸಂಶೋಧಕಿಯಾಗಿ ಕಾರ್ಯನಿರ್ವಹಿಸುವ ಅವಕಾಶ ಪಡೆದಿರುವುದು ನನಗೆ ಅತೀವ ಸಂತಸ ತಂದಿದೆ ಎಂದು ಹೇಳಿದರು.
ತಂದೆ ಪ್ರತಾಪ್ ಮುಖರ್ಜಿ ಪ್ರಾಥಮಿಕ ಶಾಲೆಯೊಂದರ ಮುಖ್ಯ ಶಿಕ್ಷಕ. ಮಗಳು ನಮಗೆ ಹಾಗೂ ಇಡೀ ದೇಶಕ್ಕೆ ಹೆಮ್ಮೆಪಡುವಂಥ ಸಾಧನೆ ಮಾಡಿದ್ದಾಳೆ ಎಂದು ಸಂತಸ ಹಂಚಿಕೊಂಡರು.







