ಇಸ್ಲಾಮ್ ವಿರುದ್ಧ ಅವಹೇಳನಕಾರಿ ಹೇಳಿಕೆ ಬಂಟ್ವಾಳದಲ್ಲಿ ಅನಂತ್ ಕುಮಾರ್ ವಿರುದ್ಧ ಕೇಸ್ ದಾಖಲು

ಬಂಟ್ವಾಳ: ಇಸ್ಲಾಮ್ ಹಾಗೂ ಮುಸ್ಲಿಮರನ್ನು ಅವಹೇಳನಕಾರಿಯಾಗಿ ನಿಂದಿಸಿದ ಉತ್ತರ ಕನ್ನಡ ಜಿಲ್ಲಾ ಸಂದಸ ಅನಂತ್ ಕುಮಾರ್ ಹೆಗಡೆ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ದೂರು ದಾಖಲಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಶರಸಿಯಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿದ ಅನಂತ್ ಕುಮಾರ್ ಹೆಗಡೆ, ಇಸ್ಲಾಮ್ ಧರ್ಮವನ್ನು ಹಾಗೂ ಮುಸ್ಲಿಮರನ್ನು ನಿಂದಿಸಿದ್ದರು. ‘‘ಎಲ್ಲಿಯತನಕ ಜಗತ್ತಿನಲ್ಲಿ ಇಸ್ಲಾಮ್ ಇರುತ್ತೋ ಅಲ್ಲೀತನಕ ಭಯೋತ್ಪಾದನೆ ಇರುತ್ತೆ... ಎಲ್ಲೀತನಕ ಇಸ್ಲಾಮನ್ನು ಈ ಜಗತ್ತಿನಿಂದ ನಾವು ಮೂಲೋತ್ಪಾಟನೆ ಮಾಡುವುದಿಲ್ಲವೋ ಅಲ್ಲೀತನಕ ಭಯೋತ್ಪಾದನೆಯನ್ನು ಕಿತ್ತು ಹಾಕಲು ಸಾಧ್ಯವಿಲ್ಲ’’ ಎಂದು ಹೇಳಿದ್ದಾರೆ.
ಇದರಿಂದ ಧಾರ್ಮಿಕಭಾವನೆಗೆ ತೀವ್ರವಾದ ಘಾಸಿ ಉಂಟಾಗಿದೆ ಎಂದು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್‌ಮಾನ್ ಬಂಟ್ವಾಳ ದೂರಿನಲ್ಲಿ ತಿಳಿಸಿದ್ದಾರೆ. ಧಾರ್ಮಿಕ ಭಾವನೆಗೆ ಘಾಸಿಉಂಟುಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದಲೇ ಅನಂತ್ ಕುಮಾರ ಹೆಗಡೆ ಸುದ್ದಿಗೋಷ್ಠಿ ನಡೆಸಿದ್ದಾರೆ. ಅವರ ಹೇಳಿಕೆಯಿಂದ ಇಸ್ಲಾಮೇತರ ಧರ್ಮದವರು ಮುಸ್ಲಿಮರನ್ನು ಅನುಮಾನದಿಂದ ನೋಡುವಂತಾಗಿದೆ. ಆದ್ದರಿಂದ ಸಂಸದನ ವಿರುದ್ದ ಭಾರತೀಯ ದಂಡ ಸಂಹಿತೆ ಕಲಂ 153(ಎ), 295(ಎ) ಮತ್ತು 502(2) ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರಗಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.







