ಧರ್ಮಶಾಲಾದಲ್ಲಿ ಭಾರತ-ಪಾಕ್ ಪಂದ್ಯಕ್ಕೆ ಕಾಂಗ್ರೆಸ್ ಆಕ್ಷೇಪ

ಶಿಮ್ಲಾ,ಫೆ.29: ಧರ್ಮಶಾಲಾದಲ್ಲಿ ಮಾ.19 ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯವನ್ನು ರದ್ದುಪಡಿಸಬೇಕು ಇಲ್ಲವೇ ಬೇರೊಂದು ಸ್ಥಳಕ್ಕೆ ಸ್ಥಳಾಂತರಗೊಳಿಸಬೇಕು ಎಂದು ಹಿಮಾಚಲ ಪ್ರದೇಶ ಕಾಂಗ್ರೆಸ್ ಬಿಸಿಸಿಐಯನ್ನು ಆಗ್ರಹಿಸಿದೆ. ಧರ್ಮಶಾಲಾದಲ್ಲಿ ವಿಶ್ವಕಪ್ ಪಂದ್ಯವನ್ನು ಆಯೋಜಿಸಲು ನಿರ್ಧರಿಸಿರುವ ಬಿಸಿಸಿಐ ಕಾರ್ಯದರ್ಶಿ ಹಾಗೂ ಬಿಜೆಪಿ ಸಂಸದ ಅನುರಾಗ್ ಠಾಕೂರ್‌ರನ್ನು ಹಿಮಾಚಲ ಪ್ರದೇಶ ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ.
ಧರ್ಮಶಾಲಾದಲ್ಲಿ ನಡೆಯಲಿರುವ ಇತರ 8 ಪಂದ್ಯಗಳಿಂದ ಬರುವ ಆದಾಯದ ಶೇ.50ರಷ್ಟು ಭಾಗವನ್ನು ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಹಾಗೂ ಉಗ್ರಗಾಮಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಮೃತಪಟ್ಟ ಹಿಮಾಚಲ ಪ್ರದೇಶದ ಸಂತಸ್ತ ಸೈನಿಕ ಕುಟುಂಬಕ್ಕೆ ನೀಡಬೇಕು ಎಂದು ಎಚ್‌ಪಿಸಿಸಿ ಅಧ್ಯಕ್ಷ ಠಾಕೂರ್ ಸುಖ್ವಿಂದರ್ ಸಿಂಗ್ ಆಗ್ರಹಿಸಿದ್ದಾರೆ.
‘‘ಕಾರ್ಗಿಲ್ ಕದನದ ಹೀರೋಗಳಾದ ಕ್ಯಾಪ್ಟನ್ ವಿಕ್ರಂ ಬಾತ್ರಾ ಹಾಗೂ ಕ್ಯಾಪ್ಟನ್ ಸೌರಭ್ ಕಾಲಿಯಾ ಸೇರಿದಂತೆ ಕಾಂಗ್ರಾದಲ್ಲಿ ಬಹಳಷ್ಟು ಸಂಖ್ಯೆಯ ಸೈನಿಕರಿದ್ದಾರೆ. ಧರ್ಮಶಾಲಾ ಸ್ಟೇಡಿಯಂ ಪಕ್ಕವೇ ಯುದ್ಧ ಸ್ಮಾರಕಗಳಿವೆ. ಪಾಕಿಸ್ತಾನ ವಿರುದ್ಧ ಪಂದ್ಯವನ್ನು ಧರ್ಮಶಾಲಾದಲ್ಲಿ ಆಯೋಜಿಸುವ ಬಗ್ಗೆ ನಮ್ಮ ಆಕ್ಷೇಪವಿದೆ. ಪಾಕ್ ವಿರುದ್ಧ ಪಂದ್ಯ ಆಯೋಜಿಸಿದರೆ ಸೈನಿಕರ ಕುಟುಂಬದ ಮನಸ್ಸಿಗೆ ಘಾಸಿ ಮಾಡಿದಂತಾಗುತ್ತದೆ’’ಎಂದು ಸಿಂಗ್ ತಿಳಿಸಿದರು.





