ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆ
ಅಧಿಕಾರಿಗಳ ಕಾರ್ಯವೈಖರಿಗೆ ಸದಸ್ಯರ ಆಕ್ಷೇಪ

ಸುಳ್ಯ: ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆಯು ಅಧ್ಯಕ್ಷ ಪ್ರಕಾಶ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಉಪಾಧ್ಯಕ್ಷೆ ಶ್ರೀಮತಿ ಮೀನಾಕ್ಷಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಮೋಹಿನಿ ನಾಗರಾಜ್, ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಇಂಜಿನಿಯರ್ ಶ್ರೀದೇವಿ ವೇದಿಕೆಯಲ್ಲಿದ್ದರು. ಸಭೆಯ ಆರಂಭದಲ್ಲೇ ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರರವರು ಪಂಚಾಯತ್‌ನ ದಿನಗೂಲಿ ನೌಕರರ ಕೆಲಸ ಬದಲಾವಣೆ ಸಂದರ್ಭ ತಾರತಮ್ಯ ನೀತಿ ಅನುಸರಿಸಲಾಗಿದೆ ಎಂದು ತರಾಟೆಗೆ ತೆಗೆದುಕೊಂಡರು. ಬದಲಾವಣೆ ಮಾಡಿದ್ದು ಒಳ್ಳೆಯದೇ. ಆದರೆ ಕೆಲವರನ್ನು ಬದಲಾಯಿಸಿ ಕೆಲವರನ್ನು ಅಲ್ಲೇ ಇಟ್ಟುಕೊಂಡದ್ದು ಯಾಕೆ? ಅವರಿಂದ ಸಂಪಾದನೆ ಜಾಸ್ತಿಯಾಗುತ್ತದೆಯೇ? ಎಂದು ಪ್ರಶ್ನಿಸಿದರು. ದೂರು ಇದ್ದವರನ್ನು ಬದಲಿಸಲಾಗಿದೆ ಎಂದು ಪ್ರಕಾಶ್ ಹೆಗ್ಡೆ ಹಾಗೂ ಮುಖ್ಯಾಧಿಕಾರಿ ಉತ್ತರಿಸಿದಾಗ ದೂರುಗಳನ್ನು ನಾನು ನೀಡುತ್ತೇನೆ ಹಾಗಾದರೆ ಬದಲಿಸುತ್ತೀರಾ? ಎಂದು ಮರು ಪ್ರಶ್ನಿಸಿದರು. ಇನ್ನು ಯಾರನ್ನು ಬದಲಾಯಿಸಬೇಕು ನೀವೇ ಹೇಳಿ ಎಂದು ಅಧ್ಯಕ್ಷ ಮತ್ತು ಮುಖ್ಯಾಧಿಕಾರಿ ಕೇಳಿದಾಗ ಶಶಿಕಲಾ ಅವರನ್ನು ಬದಲಾಯಿಸಿ ಎಂದು ಎನ್.ಎ.ಹೇಳಿದರು. ಈ ಕುರಿತಂತೆ ಸ್ವಲ್ಪ ಹೊತ್ತು ಚರ್ಚೆ ನಡೆಯಿತು. ಎಲ್ಲವೂ ಗೊತ್ತುಂಟು ಆಡಳಿತದಲ್ಲಿ ಇರುವ ಕಾರಣ ಮಾತಾಡುವುದಿಲ್ಲ ಅಷ್ಟೇ ಎಂದು ಹೇಳಿ ಎನ್.ಎ. ಚರ್ಚೆಗೆ ಮಂಗಳ ಹಾಡಿದರು.
ಸಭೆಯ ಕಾರ್ಯಸೂಚಿಯಲ್ಲಿ ಸಾರ್ವಜನಿಕರು ನೀಡಿದ ಅರ್ಜಿಗಳ ಉಲ್ಲೇಖ ಇರುತ್ತದೆ ಆದರೆ ಸದಸ್ಯರು ನೀಡಿದ ಅರ್ಜಿಗಳ ಕುರಿತು ಪ್ರಸ್ತಾಪವೇ ಇಲ್ಲ ಎಂದು ಆಡಳಿತ ಪಕ್ಷದ ಸದಸ್ಯರು ಸೇರಿದಂತೆ ಹಲವರು ತರಾಟೆಗೆ ತೆಗೆದುಕೊಂಡರು. ಅರ್ಜಿ ಕೊಡುವಾಗ ಒಟ್ಟಿಗೆ 500 ರೂ ಕೊಡಬೇಕು ಹಾಗಾದರೆ ನಮ್ಮ ಅರ್ಜಿಯ ಬಗ್ಗೆಯೂ ಉಲ್ಲೇಖ ಇರುತ್ತದೆ ಎಂದು ಕೆ.ಎಸ್.ಉಮ್ಮರ್ ವ್ಯಂಗ್ಯವಾಡಿದರು. ಚೆನ್ನಕೇಶವ ದೇವಳದ ಜಾತ್ರೋತ್ಸವ ಸಂದರ್ಭದಲ್ಲಿ ರಥಬೀದಿಯಲ್ಲಿ ಬೀದಿದೀಪ ಸಮರ್ಪಕವಾಗಿ ಹಾಕದ ಬಗ್ಗೆ ಗೋಕುಲ್‌ದಾಸ್ ಪ್ರಶ್ನಿಸಿದಾಗ ಒಪ್ಪದ ಮುಖ್ಯಾಧಿಕಾರಿ ಅಲ್ಲಿ ಎಲ್ಲ ಕಡೆಯು ಬೀದಿದೀಪ ಹಾಕಲಾಗಿದೆ ಎಂದು ಉತ್ತರ ನೀಡಿದಾಗ ಗೋಕುಲ್‌ದಾಸ್ ಆಕ್ರೋಶಗೊಂಡರು. ಕೇರ್ಪಳ ರುದ್ರಭೂಮಿ ನವೀಕರಣಕ್ಕೆ ಸಮಿತಿ ಮಾಡಿದ್ದೀರಿ. ಆದರೆ ಯಾವುದೇ ಸಭೆ ಕರೆದಿಲ್ಲ ಎಂದು ಗೋಕುಲ್‌ದಾಸ್ ಹೇಳಿದರು. ಈ ವಾರವೇ ಸಭೆ ಕರೆಯುವುದಾಗಿ ಪ್ರಕಾಶ್ ಹೆಗ್ಡೆ ಭರವಸೆ ನೀಡಿದರು. ಮೀನು ಮಾರುಕಟ್ಟೆ ಅಧಿಕ ಮೊತ್ತಕ್ಕೆ ಏಲಂ ಆಗಿದೆ. ಆದರೆ ಮೀನುಗಳಿಗೂ ಜಾಸ್ತಿ ರೇಟ್ ಆಗಿ ಜನರಿಗೆ ಹೊರೆಯಾಗಬಹುದಲ್ಲವೇ ಎಂದು ಪ್ರಶ್ನಿಸಿದ ಕೆ.ಎಂ.ಮುಸ್ತಫ ನಮಗೂ ಆದಾಯ ಬರುವ ಹಾಗೆ ಜನರಿಗೂ ಹೊರೆಯಾಗದ ಹಾಗೆ ತೀರ್ಮಾನ ಕೈಗೊಳ್ಳಬೇಕಿತ್ತು ಎಂದು ಹೇಳಿದರು. ಏಲಂ ಪಡೆದುಕೊಂಡವರು ಒಂದೇ ಕಂತಿನಲ್ಲಿ ಹಣ ಪಾವತಿಸುವ ಹಾಗೆ ನೋಡಿಕೊಳ್ಳಬೇಕು ಎಂದು ಗೋಕುಲ್‌ದಾಸ್ ಹೇಳಿದರು.







