ಲಾದೆನ್ ಹಣದಿಂದ ಚುನಾವಣೆ ಸ್ಪರ್ಧಿಸಿದ ನವಾಝ್ ಶರೀಫ್ : ಹೊಸ ಪುಸ್ತಕದ ವಾದ

ಇಸ್ಲಾಮಾಬಾದ್ , ಫೆ. 29 : ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಅವರು ಅಲ ಖಾಯಿದ ಉಗ್ರ ಸಂಘಟನೆಯ ನಾಯಕ ಉಸಾಮ ಬಿನ್ ಲಾದೆನ್ ನಿಂದ ಹಣ ಪಡೆದಿದ್ದರು ಎಂದು ಹೊಸ ಪುಸ್ತಕವೊಂದು ಹೇಳಿದೆ. ಮಾಜಿ ಐಎಸ್ ಐ ಏಜೆಂಟ್ ಖಾಲಿದ್ ಖ್ವಾಜಾ ಅವರ ಪತ್ನಿ ಶಮಾಮ ಖಾಲಿದ್ ಅವರು ಬರೆದ " ಖಾಲಿದ್ ಖ್ವಾಜಾ : ಶಹೀದ್ ಎ ಅಮನ್ " ಪುಸ್ತಕದಲ್ಲಿ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಎದುರು ಚುನಾವಣೆಗೆ ಸ್ಪರ್ಧಿಸಲು ನವಾಝ್ ಶರೀಫ್ ಅವರು ಉಸಾಮ ಬಿನ್ ಲಾದೆನ್ ನಿಂದ ಹಣ ಪಡೆದಿದ್ದರು ಎಂದು ಹೇಳಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

"ಝಿಯಾ ಆಡಳಿತ ಮುಗಿದ ಬಳಿಕ ಬೆನಜ್ಹೀರ್ ಭುಟ್ಟೋ ಅವರ ಪಿಪಿಪಿ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ಪಾಕಿಸ್ತಾನ್ ಮುಸ್ಲಿಂ ಲೀಗ್ - ನವಾಝ್ ಪಕ್ಷದ ಅಧ್ಯಕ್ಷ ನವಾಝ್ ಶರೀಫ್ ಅವರು ಅಲ್ ಖಾಯಿದಾ ಮುಖಂಡ ಉಸಾಮ ಬಿನ್ ಲಾದೆನ್ ಅವರಿಂದ ಹಣ ಪಡೆದಿದ್ದಾರೆ "ಎಂದು ಪುಸ್ತಕದಲ್ಲಿ ಹೇಳಲಾಗಿದೆ.
ಆದರೆ ಲಾಡೆನ್ ರಿಂದ ದೊಡ್ಡ ಮೊತ್ತ ಪಡೆದಿದ್ದರೂ ನವಾಝ್ ಅಧಿಕಾರಕ್ಕೆ ಬಂದ ಮೇಲೆ ಅವರ ವಿರುದ್ಧ ವರ್ತಿಸಲಾರಂಭಿಸಿದರು ಎಂದು ಹೇಳಿರುವ ಈ ಪುಸ್ತಕದಲ್ಲಿ ಐ ಎಸ್ ಐ ಮಾಜಿ ಮುಖ್ಯಸ್ಥ ನಿವೃತ್ತ ಲೆ . ಜ. ಹಮೀದ್ ಗುಲ್ ಅವರ ನೋಟ್ ಒಂದಿದ್ದು , ಅದರಲ್ಲಿ ನವಾಝ್ ಅವರಿಗೆ ಖ್ವಾಜಾ ಅವರು ಆಪ್ತರಾಗಿದ್ದರು ಎಂದು ಹೇಳಲಾಗಿದೆ.







