ರಾಷ್ಟ್ರೀಯ ಮಹನೀಯರ ಪಟ್ಟಿಯಲ್ಲಿ ಮುಸ್ಲಿಮರನ್ನು ಕೈಬಿಟ್ಟ ಮಹಾ ಸರಕಾರ
ಮುಂಬೈ,ಫೆ.28: ಮಹಾರಾಷ್ಟ್ರ ಸರಕಾರವು ಇತ್ತೀಚೆಗೆ ಪ್ರಕಟಿಸಿದ ರಾಷ್ಟ್ರೀಯ ನಾಯಕರು ಹಾಗೂ ರಾಷ್ಟ್ರೀಯ ವೀರರ ಪಟ್ಟಿಯಲ್ಲಿ ಮುಸ್ಲಿಮ್ ಮಹನೀಯರ ಹೆಸರುಗಳನ್ನು ಕೈೆಬಿಟ್ಟಿರುವುದನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. 2014ರ ನವೆಂಬರ್ 30ರಂದು ಮಹಾರಾಷ್ಟ್ರ ಸರಕಾರವು ವಿವಿಧ ರಾಷ್ಟ್ರೀಯ ನಾಯಕರು ಹಾಗೂ ವೀರರ ಗೌರವಾರ್ಥ ಆಚರಿಸಲಾಗುವ ಕಾರ್ಯಕ್ರಮಗಳಿಗೆ ಸಂಬಂಧಿಸಿ 26 ದಿನಗಳ ಪಟ್ಟಿಯೊಂದನ್ನು ಪ್ರಕಟಿಸಿದೆ.
ಸುತ್ತೋಲೆಯಲ್ಲಿ ಮುಸ್ಲಿಮರ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಹಿರಿಯ ಸಾಮಾಜಿಕ ಕಾರ್ಯಕರ್ತ, ನ್ಯಾಯವಾದಿ ಸರ್ಫರಾಝ್ ಅರ್ಝ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ದಾವೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಏಕನಾಥ್ ಖಾಡ್ಸೆ ಹಾಗೂ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಮೀರ್ ಹುಸೇನ್ ಅವರನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ.
ಮುಸ್ಲಿಮ್ ಸಮುದಾಯದಲ್ಲಿ ಒಬ್ಬನೇ ಒಬ್ಬ ಮಹಾನ್ ವ್ಯಕ್ತಿಯನ್ನು ಗುರುತಿಸಲು ಸರಕಾರಕ್ಕೆ ಸಾಧ್ಯವಾಗದಿರುವುದು ದುರದೃಷ್ಟಕರ ಸಂಗತಿಯಾಗಿದೆ. ತಾಯ್ನೆಡು ಹಾಗೂ ಮಾನವೀಯತೆಗೆ ಭಾರತೀಯ ಮುಸ್ಲಿಮರು ಸಲ್ಲಿಸಿದ ಸೇವೆಯನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ.
ವೌಲಾನಾ ಅಬುಲ್ ಕಲಾಂ ಆಝಾದ್, ಡಾ. ಝಕೀರ್ ಹುಸೇನ್, ಡಾ.ಎ.ಪಿ.ಜೆ.ಅಬ್ದುಲ್ ಕಲಾಂ, ಪರಮವೀರ ಚಕ್ರ ವಿಜೇತ ಹವಾಲ್ದಾರ್ ಮೇಜರ್ ಅಬ್ದುಲ್ ಹಮೀದ್, ಧಾರ್ಮಿಕ ನಾಯಕರಾದ ಖ್ವಾಜಾ ಗರೀಬ್ ನವಾಝ್, ವೌಲಾನಾ ಶೌಕತ್ ಅಲಿ, ಶನವಾಝ್ ಖಾನ್, ಸರ್ ಬದ್ರುದ್ದೀನ್ ತಯ್ಯಬ್ಜಿ, ಟಿಪ್ಪು ಸುಲ್ತಾನ್, ಬಹಾದೂರ್ ಶಾ ಜಫರ್, ಖಾನ್ ಅಬ್ದುಲ್ ಗಫಾರ್ ಖಾನ್, ಅಶ್ಫಖುಲ್ಲಾ ಖಾನ್ ಮತ್ತಿತರರ ಶ್ರೇಷ್ಠ ಸ್ವಾತಂತ್ರ ಹೋರಾಟಗಾರ ಬಗ್ಗೆ ಮಹಾರಾಷ್ಟ್ರ ಸರಕಾರ ಕುರುಡಾಗಿದೆಯೆಂದು ಸರ್ಫರಾಝ್ ಅರ್ಜಿಯಲ್ಲಿ ದೂರಿದ್ದಾರೆ.





