ಸರಕಾರ ಪ್ರತಿಪಕ್ಷಗಳ ನಡುವೆ ಸೌಹಾರ್ದತೆಗೆ ರಾಜ್ಯಸಭೆ ಸಾಕ್ಷಿ

ಹೊಸದಿಲ್ಲಿ, ಫೆ.29: ಹಲವು ದಿನಗಳ ತೀವ್ರ ವಾಕ್ಸಮರದ ಬಳಿಕ ಕೇಂದ್ರ ಸರಕಾರ ಹಾಗೂ ಪ್ರತಿಪಕ್ಷಗಳ ನಡುವೆ ಸೌಹಾರ್ದಯುತ ವಾತಾವರಣಕ್ಕೆ ಸೋಮವಾರ ರಾಜ್ಯಸಭೆ ಸಾಕ್ಷಿಯಾಯಿತು.ಲೋಕ ಸಭೆಯಲ್ಲಿ ಬಜೆಟ್ ಮಂಡಿಸಿದ ಬಳಿಕ ರಾಜ್ಯಸಭೆಗೆ ಆಗಮಿಸಿದ ಜೇಟ್ಲಿ, ಖ್ಯಾತ ಅರ್ಥಶಾಸ್ತ್ರಜ್ಞರೂ ಆದ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಅವರಿದ್ದ ಆಸನೆದೆಡೆಗೆ ಆಗಮಿಸಿದರು.
ಇದನ್ನು ಕಂಡ ಸಿಂಗ್‌ತಾನಾಗಿಯೇ ಮುಂದೆ ಬಂದರು. ಆನಂತರ ಇಬ್ಬರೂ ಪರಸ್ಪರ ಶುಭಾಶಯಗಳನ್ನು ಸಲ್ಲಿಸಿದರು. ಕೆಲವು ನಿಮಿಷಗಳ ಕಾಲ ಮಾತುಕತೆ ಕೂಡಾ ನಡೆಸಿದರು. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಉಪನಾಯಕರಾದ ಆನಂದ್‌ಶರ್ಮಾ ಕೂಡಾ ಜೇಟ್ಲಿ ಜೊತೆ ಶುಭಾಶಯ ವಿನಿಮಯ ಮಾಡಿಕೊಂಡರು.
ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದ ಗ್ರಾಮೀಣ ಅಭಿವೃದ್ಧಿ ಸಚಿವ ಚೌಧುರಿ ಬೀರೇಂದರ್ ಸಿಂಗ್ ಕೂಡಾ ಮನಮೋಹನ್‌ಸಿಂಗ್ ಬಳಿಗೆ ತೆರಳಿ ಅವರನ್ನು ಸ್ವಾಗತಿಸಿದರು. ರಾಜ್ಯಸಭೆಯ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಕುಳಿತಿದ್ದೆಡೆಗೆ ಅವರು ತೆರಳಿದರು. ಇಬ್ಬರು ನಾಯಕರೂ ಕೆಲವು ನಿಮಿಷ ಮಾತುಕತೆ ನಡೆಸಿದರು. ಬಜೆಟ್ ಕುರಿತು ಕೆಲವು ಬಿಜೆಪಿ ಸಂಸದರು ಜೇಟ್ಲಿಯವರನ್ನು ಅಭಿನಂದಿಸುತ್ತಿರುವ ದೃಶ್ಯಗಳೂ ರಾಜ್ಯಸಭೆಯಲ್ಲಿ ಕಂಡುಬಂದವು. ರಾಜ್ಯಸಭೆಯಲ್ಲಿ ಜೇಟ್ಲಿ ಬಜೆಟ್ ದಾಖಲೆಗಳನ್ನು ಮಂಡಿಸಿದ ಬಳಿಕ, ಸದನವು ದಿನದ ಅವಧಿಗೆ ಮುಂದೂಡಲ್ಪಟ್ಟಿತು.





