ವಿಮೆ, ಪಿಂಚಣಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಎಫ್‌ಡಿಐ ನಿಯಮಾವಳಿಯಲ್ಲಿ ಸಡಿಲಿಕೆ
ಹೊಸದಿಲ್ಲಿ,ಫೆ.29: ವಿತ್ತಸಚಿವ ಅರುಣ್ ಜೇಟ್ಲಿಯವರು ಹೆಚ್ಚಿನ ವಿದೇಶಿ ಹೂಡಿಕೆಗಳನ್ನು ಆಕರ್ಷಿಸಲು ವಿಮೆ, ಪಿಂಚಣಿ, ಸಂಪತ್ತು ಪುನರ್‌ನಿರ್ಮಾಣ ಕಂಪೆನಿಗಳು (ಎಆರ್‌ಸಿ) ಮತ್ತು ಶೇರು ವಿನಿಮಯ ಕೇಂದ್ರಗಳು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ವಿದೇಶಿ ನೇರ ಹೂಡಿಕೆ(ಎಫ್‌ಡಿಐ) ನಿಯಮಾವಳಿಗಳಲ್ಲಿ ಸಡಿಲಿಕೆಗಳನ್ನು ಮುಂಗಡಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ವಿಮೆ ಮತ್ತು ಪಿಂಚಣಿ ಕ್ಷೇತ್ರಗಳಲ್ಲಿ ಭಾರತೀಯ ವ್ಯವಸ್ಥಾಪನೆ ಮತ್ತು ನಿಯಂತ್ರಣದ ಮಾರ್ಗ ಸೂಚಿಗಳಿಗೊಳಪಟ್ಟು ಪೂರ್ವಾನುಮತಿಯ ಅಗತ್ಯವಿಲ್ಲದೆ ಶೇ.49 ರಷ್ಟು ಎಫ್‌ಡಿಐಗೆ ಅವಕಾಶ ಕಲ್ಪಿಸಲಾಗುವುದು. ಈ ಮಿತಿ ಈವರೆಗೆ ಶೇ.26ರಷ್ಟಿತ್ತು.
ಅದೇ ರೀತಿ ಎಆರ್‌ಸಿಗಳಲ್ಲಿ ಪೂರ್ವಾನುಮತಿಯ ಅಗತ್ಯವಿಲ್ಲದೆ ಶೇ.100ರಷ್ಟು ಎಫ್‌ಡಿಐ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ಈ ಮೊದಲು ಈ ಕ್ಷೇತ್ರದಲ್ಲಿ ಶೇ.49ರಷ್ಟು ಹೂಡಿಕೆಗೆ ಮಾತ್ರ ಅವಕಾಶವಿತ್ತು.
ಇದರ ಜೊತೆಗೆ ಭಾರತೀಯ ಶೇರು ಮಾರುಕಟ್ಟೆಗಳಲ್ಲಿ ವಿದೇಶಿ ಸಂಸ್ಥೆಗಳ ಹೂಡಿಕೆಯ ಮಿತಿಯನ್ನು ಶೇ.5ರಿಂದ ದೇಶಿಯ ಸಂಸ್ಥೆಗಳಿಗೆ ಸಮನಾಗಿ ಶೇ.15ಕ್ಕೆ ಹೆಚ್ಚಿಸಲಾಗಿದೆ.
ಬ್ಯಾಂಕುಗಳನ್ನು ಹೊರತುಪಡಿಸಿ ಶೇರು ವಿನಿಮಯ ಕೇಂದ್ರಗಳಲ್ಲಿ ಲಿಸ್ಟ್ ಆಗಿರುವ ಕೇಂದ್ರ ಸಾರ್ವಜನಿಕ ಕ್ಷೇತ್ರದ ಉದ್ಯಮಗಳಲ್ಲಿ ವಿದೇಶಿ ಫೋರ್ಟ್‌ಫೋಲಿಯೊ ಹೂಡಿಕೆದಾರ(ಎಫ್‌ಪಿಐ)ರಿಂದ ಹೂಡಿಕೆಗಳ ಮಿತಿಯನ್ನು ಈಗಿನ ಶೇ.24ರಿಂದ ಶೇ.49ಕ್ಕೆ ಹೆಚ್ಚಿಸಲಾಗಿದೆ.
ಈಗ ಪೂರ್ವಾನುಮತಿಯ ಅಗತ್ಯವಿಲ್ಲದೆ 18 ನಿರ್ದಿಷ್ಟ ಬ್ಯಾಂಕೇತರ ಹಣಕಾಸು ಚಟುವಟಿಕೆಗಳಿಗೆ ಸೀಮಿತವಾಗಿರುವ ಎಫ್‌ಡಿಐನ್ನು ಹಣಕಾಸು ಕ್ಷೇತ್ರ ನಿಯಂತ್ರಣ ಪ್ರಾಧಿಕಾರಗಳಿಂದ ನಿಯಂತ್ರಿಸಲ್ಪಟ್ಟಿರುವ ಇತರ ಚಟುವಟಿಕೆಗಳಿಗೂ ವಿಸ್ತರಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಜೇಟ್ಲಿ ತಿಳಿಸಿದರು.
‘‘ಮೇಕ್ ಇನ್ ಇಂಡಿಯಾ’’ ಅಭಿಯಾನವನ್ನು ಉತ್ತೇಜಿಸುವ ಮತ್ತು ಮುಂದುವರಿದ ರಾಷ್ಟ್ರಗಳಲ್ಲಿಯ ಪದ್ಧತಿಗಳನ್ನು ಅನುಸರಿಸುವ ನಿಟ್ಟಿನಲ್ಲಿ ವಿದೇಶಿ ಹೂಡಿಕೆದಾರರಿಗೆ ಕೆಲವು ಷರತ್ತುಗಳಿಗೊಳಪಟ್ಟು ‘‘ನಿವಾಸಿ ಸ್ಥಾನಮಾನ’’ವನ್ನು ನೀಡಲಾಗುವುದು. ಹಾಲಿ ಈ ಹೂಡಿಕೆದಾರರಿಗೆ ಒಂದು ಬಾರಿಗೆ ಕೇವಲ ಐದು ವರ್ಷಗಳ ಅವಧಿಗೆ ಬಿಸಿನೆಸ್ ವೀಸಾಗಳನ್ನು ನೀಡಲಾಗುತ್ತಿದೆ.





