ಎಸ್‌ಸಿ/ಎಸ್‌ಟಿ, ಮಹಿಳಾ ಉದ್ಯಮಿಗಳಿಗೆ 500 ಕೋಟಿ ರೂ.

ಹೊಸದಿಲ್ಲಿ, ಫೆ. 29: 2016-17ರ ಬಜೆಟ್‌ನಲ್ಲಿ ‘ಸ್ಟಾಂಡ್ ಅಪ್ ಇಂಡಿಯ’ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಉದ್ಯಮಿಗಳಿಗೆ ಸರಕಾರ 500 ಕೋಟಿ ರೂಪಾಯಿ ಒದಗಿಸಿದೆ.
ಅದೇ ವೇಳೆ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಗಳ ಉದ್ಯಮಿಗಳಿಗೆ ವೃತ್ತಿಪರ ಬೆಂಬಲ ನೀಡಲು ಕೈಗಾರಿಕಾ ಅಸೋಸಿಯೇಶನ್‌ಗಳ ಭಾಗೀ ದಾರಿಕೆಯೊಂದಿಗೆ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯದಲ್ಲಿ ರಾಷ್ಟ್ರೀಯ ಕೇಂದ್ರ ವೊಂದನ್ನು ಸ್ಥಾಪಿಸುವುದಾಗಿಯೂ ಸರಕಾರ ಹೇಳಿದೆ.
ಉದ್ಯಮಶೀಲತಾ ವಾತಾವರಣವನ್ನು ನಿರ್ಮಿಸುವುದಕ್ಕಾಗಿ ದಲಿತ್ ಇಂಡಿಯ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯೊಂದಿಗೆ ಸರಕಾರ ವ್ಯಾಪಕ ಮಾತುಕತೆಗಳನ್ನು ನಡೆಸಿದೆ ಎಂದು ಬಜೆಟ್ ಮಂಡಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದರು.
‘‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳು ಉದ್ಯಮಗಳನ್ನು ಆರಂಭಿಸುವಲ್ಲಿ ಮತ್ತು ನಡೆಸುವಲ್ಲಿ ಸಾಕಷ್ಟು ಭರವಸೆಯನ್ನು ತೋರಿಸಲು ಆರಂಭಿಸಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಬೆಳೆಸಲು ಕೇಂದ್ರ ಸಚಿವ ಸಂಪುಟವು ‘ಸ್ಟಾಂಡ್ ಅಪ್ ಇಂಡಿಯ’ ಯೋಜನೆಗೆ ಅನುಮೋದನೆ ನೀಡಿದೆ ಎಂದು ತಿಳಿಸಲು ನಾನು ಸಂತೋಷ ಪಡುತ್ತೇನೆ. ಈ ಉದ್ದೇಶಕ್ಕಾಗಿ 500 ಕೋಟಿ ರೂಪಾಯಿಯನ್ನು ಒದಗಿಸಲಾಗಿದೆ’’ ಎಂದರು.
ಈ ಯೋಜನೆಯ ಪ್ರಕಾರ, ಪ್ರತಿಯೊಂದು ಬ್ಯಾಂಕ್ ಶಾಖೆಯು ಕನಿಷ್ಠ ಎರಡು (ಒಂದು ಎಸ್‌ಸಿ ಮತ್ತು ಒಂದು ಎಸ್‌ಟಿ ವಿಭಾಗಗಳಲ್ಲಿ) ಉದ್ಯಮಿಗಳಿಗೆ ನೆರವು ನೀಡಬೇಕು. ಆ ಮೂಲಕ ದೇಶಾದ್ಯಂತ ಕನಿಷ್ಠ 2.5 ಲಕ್ಷ ಉದ್ಯಮಿಗಳು ಈ ಯೋಜನೆಯ ನೆರವು ಪಡೆಯುತ್ತಾರೆ ಎಂದರು.





