ಗೃಹ ಸಚಿವಾಲಯಕ್ಕೆ 77,383.12 ಕೋ.ರೂ.

ಹೊಸದಿಲ್ಲಿ,ಫೆ.29: 2016-17ನೆ ಸಾಲಿನ ಮುಂಗಡಪತ್ರದಲ್ಲಿ ಗೃಹ ವ್ಯವಹಾರಗಳ ಸಚಿವಾಲಯಕ್ಕೆ 77,383.12 ಕೋ.ರೂ.ಗಳನ್ನು ಒದಗಿಸಲಾಗಿದೆ. ಈ ಪೈಕಿ ಸಿಂಹಪಾಲನ್ನು ಆಂತರಿಕ ಭದ್ರತೆ ಮತ್ತು ಗಡಿ ಕಾವಲು ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ಸಿಆರ್‌ಪಿಎಫ್ ಮತ್ತು ಬಿಎಸ್‌ಎಫ್‌ನಂತಹ ಅರೆ ಸೇನಾ ಪಡೆಗಳಿಗೆ ಹಂಚಿಕೆ ಮಾಡಲಾಗಿದೆ. ಕಳೆದ ಸಾಲಿನ ಬಜೆಟ್‌ನಲ್ಲಿಯ 67,408.12 ಕೋ.ರೂ.ಗೆ ಹೋಲಿಸಿದರೆ ಈ ಬಾರಿ ಶೇ.24.56ರಷ್ಟು ತೀವ್ರ ಏರಿಕೆಯಾಗಿದೆ.
ಒಟ್ಟು ಮೊತ್ತದಲ್ಲಿ 50,176.45 ಕೋ.ರೂ.ಗಳನ್ನು ಏಳು ಅರೆ ಸೇನಾ ಪಡೆಗಳು ಪಡೆಯಲಿವೆ. ಆಂತರಿಕ ಭದ್ರತೆ, ಮಾವೋವಾದಿಗಳು ಮತ್ತು ಉಗ್ರರ ವಿರುದ್ಧ ಕಾರ್ಯಾಚರಣೆಗಳ ಹೊಣೆ ಹೊತ್ತಿರುವ ಸಿಆರ್‌ಪಿಎಫ್‌ಗೆ ಅತಿ ಹೆಚ್ಚು ಅಂದರೆ 16,228.18 ಕೋ.ರೂ.ಗಳನ್ನು ಒದಗಿಸಲಾಗಿದೆ. ಬಿಎಸ್‌ಎಫ್ 14,652.90 ಕೋ.ರೂ.,ಸಿಐಎಸ್‌ಎಫ್ 6,067.13 ಕೋ.ರೂ.,ಐಟಿಬಿಪಿ 4,231.04 ಕೋ.ರೂ.,ಅಸ್ಸಾಂ ರೈಫಲ್ಸ್ 4,363.88 ಕೋ.ರೂ.,ಎಸ್‌ಎಸ್‌ಬಿ 3,854.67 ಕೋ.ರೂ.,ಎನ್‌ಎಸ್‌ಜಿ 688.47 ಕೋ.ರೂ. ಪಡೆಯಲಿವೆ. ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ದಿಲ್ಲಿ ಪೊಲೀಸ್ ಇಲಾಖೆಗೆ 5657.84 ಕೋ.ರೂ.ಗಳನ್ನು ಒದಗಿಸಲಾಗಿದೆ.





