ಕ್ರೀಡಾ ಅನುದಾನದಲ್ಲಿ 50.57 ಕೋಟಿ ರೂ. ಹೆಚ್ಚಳ

ಹೊಸದಿಲ್ಲಿ, ಫೆ.29: ಹಾಲಿ ಬಜೆಟ್‌ನಲ್ಲಿ ಕ್ರೀಡಾ ಸಚಿವಾಲಯಕ್ಕೆ ನೀಡಲಾದ ಅನುದಾನದಲ್ಲಿ ಕಳೆದ ವರ್ಷಕ್ಕಿಂತ 50.87 ಕೋಟಿ ರೂ.ನಷ್ಟು ಏರಿಕೆಯಾಗಿದೆ.
ವಿತ್ತ ಸಚಿವ ಅರುಣ್‌ಜೇಟ್ಲಿ 2016-17ನೆ ಸಾಲಿನ ಬಜೆಟ್‌ನಲ್ಲಿ ಕ್ರೀಡಾ ಸಚಿವಾಲಯಕ್ಕೆ 1400 ಕೋಟಿ ರೂ.ಗಳ ಯೋಜನಾ ಮೊತ್ತ ಹಾಗೂ 192 ಕೋಟಿ ರೂ. ಯೋಜನೇತರ ವೆಚ್ಚ ಸೇರಿದಂತೆ ಒಟ್ಟು 1592 ರೂ.ಗಳ ಅನುದಾನ ಘೋಷಿಸಿದ್ದಾರೆ. ಕಳೆದ ವರ್ಷದ ಬಜೆಟ್‌ನಲ್ಲಿ ಕ್ರೀಡಾ ಸಚಿವಾಲಯಕ್ಕೆ ಒಟ್ಟು 1541.13 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿತ್ತು.
ಹಿಂದಿನ ವರ್ಷಕ್ಕೆ ಹೋಲಿಸಿದರೆ, ಈ ಸಾಲಿನಲ್ಲಿ ಯೋಜನಾ ಅನುದಾನದಲ್ಲಿ 10.82 ಕೋಟಿ ರೂ. ಹಾಗೂ ಯೋಜನೇತರ ಅನುದಾನದಲ್ಲಿ 40.50 ಕೋಟಿ ರೂ. ಏರಿಕೆಯಾಗಿದೆ. ಈಶಾನ್ಯ ಭಾರತ ಪ್ರದೇಶದಲ್ಲಿ ಕ್ರೀಡಾಭಿವೃದ್ಧಿಗಾಗಿ 144.98 ಕೋಟಿ ರೂ. ಅನುದಾನ ಘೋಷಿಸಲಾಗಿದ್ದು, ಕಳೆದ ಸಾಲಿಗಿಂತ ಕಡಿಮೆಯಾಗಿದೆ. 2015-16ರ ಬಜೆಟ್‌ನಲ್ಲಿ 150.23 ಕೋಟಿ ರೂ. ಅನುದಾನ ನೀಡಲಾಗಿತ್ತು. ರಾಷ್ಟ್ರೀಯ ಶಿಬಿರಗಳನ್ನು ಸಂಘಟಿಸುವ ಹೊಣೆಗಾರಿಕೆಯನ್ನು ಹೊಂದಿರುವ ಕ್ರೀಡಾ ಪ್ರಾಧಿಕಾರಕ್ಕೆ ಈ ಸಾಲಿನಲ್ಲಿ ಒಟ್ಟು 381.30 ಕೋಟಿ ರೂ. ಅನುದಾನ ನೀಡಲಾಗಿದ್ದು, 11.91 ಕೋಟಿ ರೂ. ಏರಿಕೆಯಾಗಿದೆ. ಆದಾಗ್ಯೂ, ಕ್ರೀಡಾ ಸಂಸ್ಥೆಗಳಿಗೆ ನೀಡಲಾಗುವ ನೆರವಿನ ಪ್ರಮಾಣವನ್ನು 545.90 ಕೋಟಿ ರೂ.ಗೆ ಏರಿಸಲಾಗಿದೆ. ಯುವಜನ ವ್ಯವಹಾರಗಳ ಸೇವೆಯಡಿ ರಾಷ್ಟ್ರೀಯ ಸೇವಾ ಕಾರ್ಯಕ್ರಮಕ್ಕೆ 215.70 ಕೋಟಿ ರೂ. ಅನುದಾನ ನೀಡಲಾಗಿದೆ. ಡೋಪಿಂಗ್ ವಿರೋಧಿ ಚಟುವಟಿಕೆಗಳಿಗಾಗಿ 12 ಕೋಟಿ ರೂ. ಅನುದಾನ ಘೋಷಿಸಲಾಗಿದ್ದು, ಇದು ಕಳೆದ ಸಾಲಿನಷ್ಟೇ ಆಗಿದೆ.





