ಇಂದಿನಿಂದ ಜರ್ಮನಿ ಓಪನ್: ಭಾರತಕ್ಕೆ ಸಿಂಧು, ಶ್ರೀಕಾಂತ್ ಸಾರಥ್ಯ
ಬರ್ಲಿನ್,ಫೆ.29: ಅರ್ಹತಾ ಸುತ್ತಿನ ಪಂದ್ಯದ ಮೂಲಕ ಮಂಗಳವಾರ ಇಲ್ಲಿ ಆರಂಭವಾಗಲಿರುವ ಜರ್ಮನಿ ಗ್ರಾನ್ ಪ್ರಿ ಗೋಲ್ಡ್ ಟೂರ್ನಿಯಲ್ಲಿ ಪಿ.ವಿ. ಸಿಂಧು ಹಾಗೂ ಕಿಡಂಬಿ ಶ್ರೀಕಾಂತ್ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.
ಕಳೆದ ವರ್ಷಾಂತ್ಯದಲ್ಲಿ ಗಾಯಗೊಂಡಿದ್ದ ವಿಶ್ವದ ನಂ.2ನೆ ಆಟಗಾರ್ತಿ ಸೈನಾ ನೆಹ್ವಾಲ್ ಇನ್ನೂ ಚೇತರಿಸಿಕೊಂಡಿಲ್ಲ. ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನ ವೇಳೆಗೆ ಸಂಪೂರ್ಣ ಫಿಟ್‌ನೆಸ್ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ.
ಇದೀಗ ಸೈನಾ ಅನುಪಸ್ಥಿತಿಯಲ್ಲಿ ಸಿಂಧು ಭಾರತದ ಮಹಿಳೆಯರ ಸಿಂಗಲ್ಸ್ ಸವಾಲಿಗೆ ಸಾರಥ್ಯವಹಿಸಿಕೊಂಡಿದ್ದಾರೆ. ವರ್ಷಾರಂಭದಲ್ಲಿ ಮಲೇಷ್ಯಾ ಮಾಸ್ಟರ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದ ಸಿಂಧು ಆನಂತರ ನಡೆದಿರುವ ದಕ್ಷಿಣ ಏಷ್ಯನ್ ಗೇಮ್ಸ್ ಹಾಗೂ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರು.
ಸೈಯದ್ ಮೋದಿ ಜಿಪಿಜಿ ಟೂರ್ನಿಯಲ್ಲಿ ಎರಡನೆ ಸುತ್ತಿನಲ್ಲೇ ಮುಗ್ಗರಿಸಿದ್ದ ಸಿಂಧು ಜರ್ಮನಿ ಓಪನ್‌ನ ಮೊದಲ ಸುತ್ತಿನಲ್ಲಿ ಅಮೆರಿಕದ ರಾಂಗ್ ಸ್ಕಾಫೆರ್‌ರನ್ನು ಎದುರಿಸಲಿದ್ದಾರೆ.
ಕಳೆದ ತಿಂಗಳು ಲಕ್ನೋದಲ್ಲಿ ನಡೆದಿದ್ದ ಸೈಯದ್ ಮೋದಿ ಗ್ರಾನ್ ಪ್ರಿ ಟೂರ್ನಮೆಂಟ್‌ನ್ನು ಜಯಿಸಿರುವ ಶ್ರೀಕಾಂತ್ ಪ್ರಸ್ತುತ ಶ್ರೇಷ್ಠ ಫಾರ್ಮ್‌ನಲ್ಲಿದ್ದಾರೆ. ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪುರುಷರ ತಂಡ ಐತಿಹಾಸಿಕ ಕಂಚಿನ ಪದಕ ಗೆಲ್ಲುವಲ್ಲಿ ಮಹತ್ವದ ಕಾಣಿಕೆ ನೀಡಿದ್ದರು.
ಆರನೆ ಶ್ರೇಯಾಂಕದ ಶ್ರೀಕಾಂತ್ ಜರ್ಮನಿ ಓಪನ್‌ನ ಮೊದಲ ಸುತ್ತಿನಲ್ಲಿ ಜಪಾನ್‌ನ ತಕುಮಾ ಯುಯೆಡಾರನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಯುವ ಆಟಗಾರ ಸಮೀರ್ ವರ್ಮ,ಪಿ. ಕಶ್ಯಪ್, ಅಜಯ್ ಜಯರಾಮ್, ಬಿ.ಸಾಯ್ ಪ್ರಣೀತ್ ಹಾಗೂ ಎಚ್.ಎಸ್. ಪ್ರಣಯ್ ಸ್ಪರ್ಧಿಸಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಹಾಗೂ ಬಿ. ಸುಮೀತ್ ರೆಡ್ಡಿ ಭಾರತವನ್ನು ಪ್ರತಿನಿಧಿಸಲಿದ್ದು, ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ನ ಮಾರ್ಕೊಸ್ ಎಲ್ಲಿಸ್ ಹಾಗೂ ಕ್ರಿಸ್ ಲಾಗ್ರಿಝ್‌ರನ್ನು ಎದುರಿಸಲಿದ್ದಾರೆ.







