ಭಾರತದ ಮಹಿಳಾ ಹಾಕಿ ತಂಡಕ್ಕೆ ಸತತ ಸೋಲು
ಜೋಹಾನ್ಸ್‌ಬರ್ಗ್, ಫೆ.29: ದಕ್ಷಿಣ ಆಫ್ರಿಕ ಪ್ರವಾಸದಲ್ಲಿರುವ ಭಾರತದ ಮಹಿಳಾ ಹಾಕಿ ತಂಡ ಸತತ ಎರಡನೆ ಸೋಲು ಕಂಡಿದೆ. ಸೋಮವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಜರ್ಮನಿಯ ವಿರುದ್ಧ 2-3 ಅಂತರದಿಂದ ಸೋತಿದೆ.
ರವಿವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ ಜರ್ಮನಿಯ ವಿರುದ್ಧ 0-3 ಅಂತರದಿಂದ ಸೋತಿತ್ತು. ಇದೀಗ ಸತತ ಎರಡನೆ ಸೋಲು ಕಂಡಿದೆ.
ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಿದ ಸುನೀತಾ ಲಾಕ್ರಾ ಭಾರತಕ್ಕೆ ಆರಂಭದಲ್ಲೇ 1-0 ಮುನ್ನಡೆ ಒದಗಿಸಿಕೊಟ್ಟಿದ್ದರು. ಲೀಸಾ ಬಾರಿಸಿದ ಗೋಲಿನ ನೆರವಿನಿಂದ ಜರ್ಮನಿ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿತು.
ಅನುರಾಧಾ ದೇವಿ ಭಾರತಕ್ಕೆ ಮತ್ತೊಮ್ಮೆ ಮುನ್ನಡೆ ಒದಗಿಸಿಕೊಟ್ಟರು. ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಿದ ಜರ್ಮನಿಯ ಹ್ಯಾನ್ ಕ್ರೂಗೆರ್ ಸ್ಕೋರನ್ನು 2-2 ರಿಂದ ಸಮಬಲಗೊಳಿಸಿದರು.
ಅಂತಿಮ ಅವಧಿಯಲ್ಲಿ ಉಭಯ ತಂಡಗಳು ಮುನ್ನಡೆಗಾಗಿ ತೀವ್ರ ಪೈಪೋಟಿ ನಡೆಸಿದವು. ಪಂದ್ಯದಲ್ಲಿ ಎರಡನೆ ಬಾರಿ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಿದ ಕ್ರೂಗೆರ್ ಜರ್ಮನಿಗೆ 3-2 ಅಂತರದ ಗೆಲುವು ತಂದುಕೊಟ್ಟರು. ಗೆಲುವಿನ ರೂವಾರಿಯಾಗಿ ಮೂಡಿಬಂದರು. ಭಾರತ ಮಂಗಳವಾರ ನಡೆಯಲಿರುವ ಮೂರನೆ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಎದುರಿಸಲಿದೆ







