ನೈಜ ದೇಶದ್ರೋಹಿಗಳ ವಿರುದ್ಧ ಕ್ರಮವಿಲ್ಲವೇಕೆ?
ಮಿಲಿಟರಿಗೆ ರಿಕ್ರುಟ್ಮೆಂಟ್ ನಡೆಯುವಾಗ ಖಾಕಿ ಬರ್ಮುಡಾದ ಹಿಂದುತ್ವ ಕಾಲಾಳುಗಳು ಮಿಲಿಟರಿ ಸೇರಲು ಬರುವುದೇ ಇಲ್ಲ. ಆದರೆ ಸಭೆ ಸಮಾರಂಭಗಳಲ್ಲಿ ಮಾತ್ರ ಹೆಂಗಸರನ್ನು ಮತ್ತು ಹೈಸ್ಕೂಲ್ ಮಕ್ಕಳನ್ನು ಸೇರಿಸಿ ದೇಶಪ್ರೇಮದ ಬೊಬ್ಬೆ ಹಾಕುವುದರಲ್ಲಿ ಈ ಸಂಘಿಗಳು ಅಗ್ರಗಣ್ಯರು. ಸಿಯಾಚಿನ್‌ನಲ್ಲಿ ಹುತಾತ್ಮರಾದ ವೀರ ಯೋಧ ಹನುಮಂತಪ್ಪ, ಮಹೇಶ್ ಮತ್ತು ನಾಗೇಶ್ ಇವರ ಪತ್ನಿ ಅಥವಾ ತಾಯಿಯನ್ನೂ ತಮ್ಮ ಸಂಘಟನೆಯೊಂದಿಗೆ ಸೇರಿಸಿಕೊಳ್ಳುವ ಭಾವನಾತ್ಮಕ ತಂತ್ರ ಸಂಘ ಪರಿವಾರದವರಿಂದ ಆಗುತ್ತಿದೆ (ವಿಚಿತ್ರವೆಂದರೆ ಅವರ ತಂದೆಯನ್ನು ಅಥವಾ ಕುಟುಂಬದ ಇತರ ಗಂಡಸರನ್ನು ಸೇರಿಸಿಕೊಳ್ಳುತ್ತಿಲ್ಲ. ಇದೂ ಮನೋವೈಜ್ಞಾನಿಕ ತಂತ್ರ). ಕಲಬುರಗಿಯ ದಿವಂಗತ ಪೊಲೀಸ್ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ ಬಂಡೆಯವರ ಪತ್ನಿಯನ್ನು ತಮ್ಮ ಸಂಘಟನೆಯೊಂದಿಗೆ ಕೇಸರಿಗಳು ಸೇರಿಸಿಕೊಂಡಿದ್ದಾರೆ. ಆದರೆ ಈ ಸಂಘಿಗಳಲ್ಲಿ ಯಾವುದೇ ಗಂಡಸು ಸ್ವತಃ ಮಿಲಿಟರಿ ಸೇರಲು ಮುಂದೆ ಬರುತ್ತಿಲ್ಲ. ಇವರ ಪೌರುಷವೆಲ್ಲ ಕೇಸರಿ ಪಡ್ಡೆಗಳನ್ನು ಮುಸ್ಲಿಮ್, ಕ್ರೈಸ್ತ ಮತ್ತು ದಲಿತರ ವಿರುದ್ಧ ಪ್ರಚೋದಿಸುವುದಕ್ಕೆ ಮಾತ್ರ ಸೀಮಿತ. ಇದು ಆವರ ಪಕ್ಕಾ ಹೇಡಿತನ ತೋರಿಸುತ್ತದೆ. ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ ಕುಮಾರ್ ಹೆಗಡೆ- ಈ ಜಗತ್ತಿನಿಂದ ಭಯೋತ್ಪಾದನೆ ಸಂಪೂರ್ಣ ನಿವಾರಿಸಬೇಕಾದರೆ ಇಸ್ಲಾಮ್ ಧರ್ಮವನ್ನೇ ಮೂಲೋತ್ಪಾಟನೆ ಮಾಡಬೇಕು ಎನ್ನುತ್ತಾರೆೆ! ಅದೇ ದಿನ ಉತ್ತರ ಪ್ರದೇಶದ ಆಗ್ರಾದಲ್ಲಿ ಮೂವರು ಬಿಜೆಪಿ ಶಾಸಕರು ಭಾರತೀಯ ಮುಸ್ಲಿಮರು ರಾಕ್ಷಸರು, ಅವರ ವಿರುದ್ಧ ಅಂತಿಮ ಯುದ್ಧಕ್ಕಾಗಿ ಸಿದ್ಧರಾಗಿ ಎಂದು ಕರೆ ನೀಡುತ್ತಾರೆ! ಭಾರತದೆಲ್ಲೆಡೆ ಸಾರ್ವಜನಿಕವಾಗಿ ಇಂತಹ ಪ್ರಚೋದನಾತ್ಮಕ ಹೇಳಿಕೆ ಕೊಡುತ್ತಲೇ ಇರಬೇಕೆಂದು ನೇರವಾಗಿ ಅಮಿತ್ ಶಾರಿಂದ ಎಲ್ಲೆಡೆಯ ಹಿಂದೂ ಮುಖಂಡರಿಗೆ ನೇರ ಆದೇಶ ಬಂದಿದೆಯಂತೆ. ಇಂತಹ ಹೇಳಿಕೆಗಳು ಉಲ್ಟಾ ಹೊಡೆದಾಗ ಮಾತ್ರ ಅದು ಅವರವರ ವೈಯಕ್ತಿಕ ಹೇಳಿಕೆ, ನಮ್ಮ ಹಿಂದುತ್ವ ಸಂಘಟನೆ ಅಥವಾ ಬಿಜೆಪಿಗೆ ಅವರ ಹೇಳಿಕೆ ಸಂಬಂಧಿಸಿಲ್ಲ ಎಂದು ಹೇಳಿ ಜಾರಿಕೊಳ್ಳುತ್ತಾರೆ. ಇದು ಹಿಂದುತ್ವ ಸಂಘಟನೆಗಳ ಅತ್ಯಂತ ಹಳೆಯ ಕುತ್ಸಿತ ತಂತ್ರ. ಉತ್ತರ ಕನ್ನಡದ ಸಂಸದ ಅನಂತ ಕುಮಾರ್ ಹೆಗಡೆಯ ವಿರುದ್ಧ ಈಗಾಗಲೇ ಮೂರು ಕಡೆ ಪೊಲೀಸ್ ದೂರುಗಳು ದಾಖಲಾಗಿವೆ. ಸುಮಾರು ಮೂರೂವರೆ ವರ್ಷಗಳ ಹಿಂದೆ ಮಂಗಳೂರಿನ ಓರ್ವ ಸಂಘ ಪರಿವಾರದ ವಕೀಲ ಪಿ.ಪಿ. ಹೆಗ್ಡೆ ಎಂಬವರು ಬೆಳ್ತಂಗಡಿಯಲ್ಲಿ ಒಟ್ಟಿಗೇ ಮೂರು ದೇಶದ್ರೋಹದ ಹೇಳಿಕೆ ಕೊಟ್ಟಿದ್ದಾರೆ. ಅವೆಂದರೆ - ನಮ್ಮ ದೇಶದ ತ್ರಿವರ್ಣ ಧ್ವಜದ ಬದಲು ಕೇಸರಿ ಧ್ವಜ ರಾಷ್ಟ್ರಧ್ವಜ ಆಗಬೇಕು, ಸ್ವಾತಂತ್ರ್ಯ ದಿನಾಚರಣೆ ಮಾಡಬಾರದು ಮತ್ತು ಮಹಾತ್ಮಾ ಗಾಂಧೀಜಿಗೆ ರಾಷ್ಟ್ರಪಿತ ಅನ್ನಬಾರದು ಎಂದು ಮೂರು ದೇಶದ್ರೋಹದ ಹೇಳಿಕೆ ಕೊಟ್ಟ ಬಗ್ಗೆ ಬೆಳ್ತಂಗಡಿಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಕರ್ನಾಟಕದಲ್ಲಿ ಈಗ ಕಾಂಗ್ರೆಸ್ ಸರಕಾರವಿದ್ದರೂ ಪೊಲೀಸರು ಮೂರೂವರೆ ವರ್ಷಗಳಿಂದ ಚಾರ್ಜ್‌ಶೀಟ್ ಹಾಕಿಲ್ಲ. ಆದರೆ ಗುಜರಾತಿನಲ್ಲಿ ಹಾರ್ದಿಕ್ ಪಟೇಲ್ ವಿರುದ್ಧ ರಾಷ್ಟ್ರಧ್ವಜದ ದುರುಪಯೋಗ ಮಾಡಿದನೆಂದು ನಾಲ್ಕೇ ದಿನದೊಳಗೆ ಘರ್ಜಿಸಿ ದೇಶದ್ರೋಹದ ಕೇಸ್ ಹಾಕಿ ಅನೇಕ ತಿಂಗಳಿನಿಂದ ಗುಜರಾತ್ ಸರಕಾರ ಜೈಲಿನೊಳಗೆ ಇಟ್ಟಿದೆ. ಕರ್ನಾಟಕಕ್ಕೂ ಗುಜರಾತಿಗೂ ದೇಶದ್ರೋಹದ ವ್ಯಾಖ್ಯೆಯಲ್ಲಿ ಮತ್ತು ತ್ವರಿತ ಕಾನೂನು ಕ್ರಮ ಕೈಗೊಳ್ಳುವಲ್ಲಿ ಇಷ್ಟೊಂದು ಭಾರೀ ಅಂತರ ಯಾಕಿದೆ ?
ತಮ್ಮ ವಿಶ್ವಾಸಿ
-ವೀರಪ್ಪ ಡಿ ಎನ್ ಮಡಿಕೇರಿ





