ಟ್ರಂಪ್ ರ್ಯಾಲಿಯಲ್ಲಿ ಪ್ರತಿಭಟನೆ: ಕರಿಯ ಜನಾಂಗೀಯರಿಂದ ಸಭೆಗೆ ಅಡ್ಡಿ

ವಾಶಿಂಗ್ಟನ್, ಮಾ.1: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಸೋಮವಾರ ವರ್ಜಿನಿಯಾದಲ್ಲಿ ನಡೆಸಿದ ಪ್ರಚಾರ ರ್ಯಾಲಿಗೆ ಕೆಲವು ಪ್ರತಿಭಟನಾಕಾರರು ಅಡ್ಡಿಪಡಿಸಿದ ಘಟನೆ ಸೋಮವಾರ ನಡೆದಿದೆ. ಕರಿಯ ಜನಾಂಗೀಯರ ಹಕ್ಕುಗಳಿಗಾಗಿನ ‘ಬ್ಲಾಕ್ ಲಿವ್ಸ್ ಮ್ಯಾಟರ್ ಮೂವ್‌ಮೆಂಟ್ ’ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಟ್ರಂಪ್ ರವಿವಾರ ಸಿಎನ್‌ಎನ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಬಿಳಿಯ ಜನಾಂಗೀಯ ವಾದಿಗಳನ್ನು ಸ್ಪಷ್ಟವಾಗಿ ಖಂಡಿಸಲಿಲ್ಲವೆಂಬ ಕಾರಣಕ್ಕಾಗಿ ವ್ಯಾಪಕ ಟೀಕೆಗೊಳಗಾದ ಒಂದು ದಿನದ ಬಳಿಕ ಅವರ ರ್ಯಾಲಿಯಲ್ಲಿ ಪ್ರತಿಭಟನೆ ನಡೆದಿದೆ.
ವರ್ಜಿನಿಯದ ರ್ಯಾಡ್‌ಫೋರ್ಡ್‌ನಲ್ಲಿ ನಡೆದ ಟ್ರಂಪ್ ರ್ಯಾಲಿಯಲ್ಲಿ ನಡೆದ ಪ್ರತಿಭಟನೆಯ ವೀಡಿಯೊ ಚಿತ್ರೀಕರಣ ಮಾಡುತ್ತಿದ್ದ ಟೈಮ್ ಪತ್ರಿಕೆಯ ಛಾಯಾಗ್ರಾಹಕನೊಬ್ಬನನ್ನು ಅಮೆರಿಕದ ರಹಸ್ಯ ಭದ್ರತಾ ಏಜೆಂಟರ್ ಒಬ್ಬಾತ ಕತ್ತಿನಪಟ್ಟಿ ಹಿಡಿದೆಳೆದು ಹಲ್ಲೆ ನಡೆಸಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸಭೆಯಲ್ಲಿ ಪ್ರತಿಭಟನಾಕಾರರು ಹಾಗೂ ಟ್ರಂಪ್ ಬೆಂಬಲಿಗರ ನಡುವೆ ನೇರ ವಾಗ್ದಾಳಿ ನಡೆದಿರುವುದಾಗಿಯೂ ಅವರು ತಿಳಿಸಿದ್ದಾರೆ.ತನ್ನ ರ್ಯಾಲಿಯಲ್ಲಿ ಪ್ರತಿಭಟನೆ ನಡೆಸಿದವರನ್ನು ಅಕ್ರಮ ಮೆಕ್ಸಿಕೊ ವಲಸಿಗರೆಂದು ಟ್ರಂಪ್ ಆಪಾದಿಸಿದರು.
ಆನಂತರ ಕರಿಯ ಜನಾಂಗೀಯ ಪ್ರತಿಭಟನಾಕಾರರನ್ನು, ಪೊಲೀಸ್ ಬೆಂಗಾವಲಿನೊಂದಿಗೆ ರ್ಯಾಲಿಯಿಂದ ಹೊರಕರೆದುಕೊಂಡು ಹೋಗಲಾಯಿತು ಅಧ್ಯಕ್ಷೀಯ ಅಭ್ಯರ್ಥಿಯ ಆಯ್ಕೆಗಾಗಿ ವರ್ಜಿನಿಯಾ 11 ರಾಜ್ಯಗಳಲ್ಲಿ ಮಂಗಳವಾರ ಚುನಾವಣೆ ನಡೆಯಲಿರುವಂತೆಯೇ, ಟ್ರಂಪ್ ರ್ಯಾಲಿಯಲ್ಲಿ ಪ್ರತಿಭಟನೆ ನಡೆದಿದೆ.





