ಸಾಮೂಹಿಕ ಅತ್ಯಾಚಾರ ವರದಿಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಒತ್ತಾಯ
ಜಾಟ್ ಮೀಸಲಾತಿ ಚಳವಳಿ
ಹೊಸದಿಲ್ಲಿ, ಮಾ.1: ಜಾಟ್ ಮೀಸಲಾತಿ ಚಳವಳಿಯ ವೇಳೆ, ಹರ್ಯಾಣದಲ್ಲಿ ಅನೇಕ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆಯೆಂಬ ವರದಿಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ನೀಡಬೇಕೆಂದು ಕಾಂಗ್ರೆಸ್ ಸಂಸದೆ ಕುಮಾರಿ ಸೆಲ್ಜಾ ಇಂದು ಆಗ್ರಹಿಸಿದ್ದಾರೆ.
ಶೂನ್ಯ ವೇಳೆಯಲ್ಲಿ ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ನಡೆದ ಚಳವಳಿಯ ಸಂದರ್ಭದಲ್ಲಿ ನಡೆದ ಭಾರೀ ಪ್ರಮಾಣದ ಹಿಂಸಾಚಾರಕ್ಕೆ ಹರ್ಯಾಣ ಸರಕಾರ ಮೂಕ ಪ್ರೇಕ್ಷಕನಾಗಿತ್ತು ಎಂದು ಆರೋಪಿಸಿದರು.
ಜಾಟ್ ಮೀಸಲಾತಿ ಚಳವಳಿಗಾರರು ಮುತ್ರಾಲ್ ಪಟ್ಟಣದ ಬಳಿ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ವರದಿಯಾಗಿರುವ ಆರೋಪಗಳ ಬಗ್ಗೆ ಮಾತನಾಡಿದ ಸೆಲ್ಜಾ, ರಾಜ್ಯ ಸರಕಾರದ ತನಿಖೆ ತಂಡವನ್ನು ನಂಬುವಂತಿಲ್ಲ. ಹೈಕೋರ್ಟ್ ಈ ಬಗ್ಗೆ ತನಿಖೆ ನಡೆಸಬೇಕು. ತಾವು ನ್ಯಾಯಾಂಗ ತನಿಖೆಯನ್ನು ಬಯಸುತ್ತಿದ್ದೇವೆ ಎಂದರು.
ಹರ್ಯಾಣ ಸರಕಾರವು ಘಟನೆಯ ಬಗ್ಗೆ ತನಿಖೆಗೆ ಮೂವರು ಮಹಿಳಾ ಪೊಲೀಸ್ ಅಧಿಕಾರಿಗಳ ತಂಡವೊಂದನ್ನು ರಚಿಸಿದೆ.
ಹೈದರಾಬಾದ್‌ನಲ್ಲಿ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ, ಸಿಪಿಐ ನಾಯಕ ಡಿ. ರಾಜಾ ಹಾಗೂ ಇತರ ರಾಜಕೀಯ ನಾಯಕರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿರುವುದನ್ನು ಸಿಪಿಎಂ ಸಂಸದ ಟಿ.ಕೆ. ರಂಗರಾಜನ್ ಖಂಡಿಸಿದರು.
ಯೆಚೂರಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪಕ್ಷದ ನಾಯಕರಾದ ಆನಂದ ಶರ್ಮಾ ಹಾಗೂ ಅಜಯ ಮಾಕನ್, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಡಿ. ರಾಜಾ, ಜೆಡಿಯು ನಾಯಕ ಕೆ.ಸಿ. ತ್ಯಾಗಿ, ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಹಾಗೂ ಉಮರ್ ಫಾರೂಕ್‌ರ ಜನಾರ್ದನ ಗೌಡ ಎಂಬ ವಕೀಲರ ದೂರಿನ ಮೇಲೆ ಹೈದರಾಬಾದ್‌ನ ನ್ಯಾಯಾಲಯವೊಂದರ ಆದೇಶದಂತೆ ಎಫ್‌ಐಆರ್ ದಾಖಲಿಸಲಾಗಿದೆ.
ಯೆಚೂರಿ ಹಾಗೂ ರಾಜಾರ ಬಂಧನದ ಬಗ್ಗೆ ರಾಜ್ಯಸಭಾಧ್ಯಕ್ಷರಿಗೆ ಯಾವುದೇ ನೋಟಿಸ್ ಬಂದಿದೆಯೇ ಎಂಬುದನ್ನು ತಿಳಿಯಲು ರಂಗರಾಜನ್ ಬಯಸಿದರು.
ಕಾಂಗ್ರೆಸ್ ಸದಸ್ಯ ಶಾಂತಾರಾಮ ನಾಯ್ಕೆ, ದಕ್ಷಿಣಗೋವಾದಲ್ಲಿ ನಡೆಸಲುದ್ದೇಶಿಸಿರುವ ರಕ್ಷಣಾ ವಸ್ತುಪ್ರದರ್ಶನದ ವಿಷಯವೆತ್ತಿ, ಪ್ರಸ್ತಾಪಿತ ಪ್ರದರ್ಶನದ ಬಗ್ಗೆ ಸ್ಥಳೀಯ ಜನರು ಆಕ್ರೋಶಿತರಾಗಿದ್ದಾರೆ. ಗೋವಾ ಸರಕಾರ ಕೇಂದ್ರದ ಒತ್ತಡಕ್ಕೊಳಗಾಗಿದೆ. ಅಂತಹ ವಸ್ತುಪ್ರದರ್ಶನಗಳನ್ನು ಸಾಮಾನ್ಯವಾಗಿ ದಿಲ್ಲಿಯ ಪ್ರಗತಿ ಮೈದಾನದಲ್ಲಿ ನಡೆಸಲ್ಪಡುತ್ತಿದ್ದವು ಎಂದರು.
ಆಂಧ್ರಪ್ರದೇಶ ಹಾಗೂ ತೆಲಂಗಾಣಗಳ ತಾಳೆ ಬೇಸಾಯಗಾರರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಕಾಂಗ್ರೆಸ್ ಸಂಸದ ಕೆವಿಪಿ ರಾಮಚಂದ್ರ ರಾವ್ ಮೇಲ್ಮನೆಯಲ್ಲಿ ಪ್ರಸ್ತಾಪಿಸಿದರು.
ಜಾರ್ಖಂಡ್‌ನಲ್ಲಿ ಮೈಥಾನ್ ವಿದ್ಯುತ್ ಘಟಕದಿಂದ ಬಾಧಿತರಾಗಿರುವ ರೈತರ ಸಮಸ್ಯೆಯನ್ನೆತ್ತಿದ ಜಾರ್ಖಂಡ್ ಮುಕ್ತಿ ಮೋರ್ಚಾದ ಸಂಜೀವ ಕುಮಾರ್, ವಿದ್ಯುತ್ ಘಟಕಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿರುವ ರೈತರಿಗೆ ಖಾಯಂ ಸರಕಾರಿ ಉದ್ಯೋಗ ಹಾಗೂ ಸಾಕಷ್ಟು ವೈದ್ಯಕೀಯ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿದರು.





