ಏಷ್ಯಾಕಪ್: ಇಂದು ಪಾಕಿಸ್ತಾನಕ್ಕೆ ಬಾಂಗ್ಲಾದೇಶ ಎದುರಾಳಿ

ಮೀರ್ಪುರ, ಮಾ.1: ಸತತ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಆತಿಥೇಯ ಬಾಂಗ್ಲಾದೇಶ ಬುಧವಾರ ನಡೆಯಲಿರುವ ಏಷ್ಯಾಕಪ್ ಟ್ವೆಂಟಿ-20 ಟೂರ್ನಿಯ ರೌಂಡ್ ರಾಬಿನ್ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಪ್ರಮುಖ ಬೌಲರ್ ಮುಸ್ತಫಿಝರ್ರಹ್ಮಾನ್ ಅನುಪಸ್ಥಿತಿಯಲ್ಲಿಯೂ ಬಾಂಗ್ಲಾದೇಶ ತಂಡ ಪಾಕಿಸ್ತಾನ ತಂಡಕ್ಕೆ ಸವಾಲಾಗುವ ನಿರೀಕ್ಷೆಯಿದೆ.
ಏಷ್ಯಾಕಪ್ ಫೈನಲ್‌ಗೆ ತಲುಪಲು ಉಭಯ ತಂಡಗಳಿಗೂ ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ. ಇತ್ತೀಚೆಗೆ ಸ್ವದೇಶದಲ್ಲಿ ಏಕದಿನ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಬಾಂಗ್ಲಾದೇಶ ಈವರೆಗೆ ಚುಟುಕು ಮಾದರಿ ಪಂದ್ಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ.
ಮಶ್ರಾಫೆ ಮುರ್ತಝಾ ನೇತೃತ್ವದ ಬಾಂಗ್ಲಾ ತಂಡಕ್ಕೆ ತನ್ನ ವಿರುದ್ಧ ಕೇಳಿ ಬರುತ್ತಿರುವ ಟೀಕೆಗೆ ಉತ್ತರಿಸಲು ಇದೊಂದು ಉತ್ತಮ ಅವಕಾಶವಾಗಿದೆ.
ಭಾರತದಲ್ಲಿ ಮುಂದಿನ ವಾರ ಆರಂಭವಾಗಲಿರುವ ಟ್ವೆಂಟಿ-20 ವಿಶ್ವಕಪ್‌ಗೆ ಮೊದಲು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಇದು ಅನುಕೂಲಕರವಾಗಲಿದೆ.
ಮುಸ್ತಫಿಝುರ್ರಹ್ಮಾನ್ ಗಾಯಗೊಂಡಿರುವುದು ಬಾಂಗ್ಲಾಕ್ಕೆ ತಲೆನೋವಾಗಿ ಪರಿಣಮಿಸಿದೆ. ವಿಭಿನ್ನ ಶೈಲಿಯ ಬೌಲರ್ ಮುಸ್ತಫಿಝುರ್ ಪಾಕಿಸ್ತಾನದ ಬ್ಯಾಟಿಂಗ್ ಸರದಿಗೆ ಖಂಡಿತವಾಗಿಯೂ ಸವಾಲಾಗುತ್ತಿದ್ದರು.
ಕಳೆದ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದ ಹಿರಿಯ ಆರಂಭಿಕ ದಾಂಡಿಗ ತಮೀಮ್ ಇಕ್ಬಾಲ್ ತಂಡಕ್ಕೆ ವಾಪಸಾಗುತ್ತಿರುವುದು ಬಾಂಗ್ಲಾಕ್ಕೆ ಸಿಹಿ ಸುದ್ದಿಯಾಗಿದೆ. ಇಕ್ಬಾಲ್ ಬಾಂಗ್ಲಾಕ್ಕೆ ಭರ್ಜರಿ ಆರಂಭ ನೀಡಬಲ್ಲರು.
ಮತ್ತೊಂದೆಡೆ, ಭಾರತ ವಿರುದ್ಧದ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ಬ್ಯಾಟಿಂಗ್ ದುರ್ಬಲವಾಗಿತ್ತು. ಕೇವಲ 83 ರನ್‌ಗೆ ಆಲೌಟಾಗಿತ್ತು. ಯುಎಇ ವಿರುದ್ಧದ ಪಂದ್ಯದಲ್ಲೂ ಅಗ್ರ ಕ್ರಮಾಂಕದ ದಾಂಡಿಗರು ಪರದಾಟ ನಡೆಸಿದ್ದರು.
ಪಂದ್ಯದ ಸಮಯ: ರಾತ್ರಿ 7:00







