ಅರ್ಜಿ ವಿಚಾರಣೆಗೆ ಸು.ಕೋ. ಸಮ್ಮತಿ
ಇಶ್ರತ್ ಜಹಾನ್ ಪ್ರಕರಣ
ಹೊಸದಿಲ್ಲಿ, ಮಾ.1: ಬಂಧಿತ ಲಷ್ಕರೆ ತಯ್ಯಿಬಾ ಕಾರ್ಯಕರ್ತ ಡೇವಿಡ್ ಹೇಡ್ಲಿ ಇತ್ತೀಚೆಗೆ ನೀಡಿರುವ ಸಾಕ್ಷದ ಹಿನ್ನೆಲೆಯಲ್ಲಿ 2004ರ ಆರೋಪಿತ ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್‌ಗೆ ಸಂಬಂಧಿಸಿ ಗುಜರಾತ್ ಪೊಲೀಸ್ ಅಧಿಕಾರಿಗಳ ವಿರುದ್ಧದ ಕ್ರಿಮಿನಲ್ ವಿಚಾರಣೆ, ಅಮಾನತು ಹಾಗೂ ಇತರ ಕ್ರಮಗಳನ್ನು ರದ್ದುಗೊಳಿಸುವಂತೆ ಕೋರಿರುವ ಮನವಿಯೊಂದರ ವಿಚಾರಣೆಗೆ ಸುಪ್ರೀಂಕೋರ್ಟ್ ಇಂದು ಒಪ್ಪಿದೆ.
ಇಶ್ರತ್ ಒಬ್ಬಳು ಲಷ್ಕರೆ ತಯ್ಯಿಬಾ ಕಾರ್ಯಕರ್ತೆಯಾಗಿದ್ದಾಳೆಂದು ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಹೇಡ್ಲಿ, ಮುಂಬೈಯ ನ್ಯಾಯಾಲಯವೊಂದಕ್ಕೆ ಇತ್ತೀಚೆಗೆ ತಿಳಿಸಿದ್ದಾನೆ.
‘‘ಅದು ಪಟ್ಟಿ ಮಾಡಲ್ಪಡಲಿ. ನಾವದನ್ನು ಬಳಿಕ ನೋಡುತ್ತೇನೆ’’ ಎಂದಿರುವ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಹಾಗೂ ನ್ಯಾಯಮೂರ್ತಿ ಯು.ಯು.ಲಲಿತ್‌ರಿದ್ದ ಪೀಠವೊಂದು ಹೇಳಿತು. ವಕೀಲ ಎಂ.ಎಲ್.ಶರ್ಮಾ ತುರ್ತು ವಿಚಾರಣೆಗಾಗಿ ವಿಷಯವನ್ನು ಉಲ್ಲೇಖಿಸಿದ್ದರು.
ಇಶ್ರತ್ ಎಲ್‌ಇಟಿ ಭಯೋತ್ಪಾದಕಿಯೆಂಬುದನ್ನು ನಿರ್ಧಾರಾತ್ಮಕವಾಗಿ ಸ್ಥಾಪಿಸುವ ಹೇಡ್ಲಿಯ ಹೇಳಿಕೆ ಮಹತ್ತ್ವವಾದುದೆಂದು ಶರ್ಮಾ ಹೇಳಿದರು.
ನಕಲಿ ಎನ್‌ಕೌಂಟರ್ ಆರೋಪದಲ್ಲಿ ಡಿಐಜಿ, ಡಿಜಿ. ವಂಜಾರ ಸಹಿತ ಗುಜರಾತ್ ಪೊಲೀಸ್ ಸಿಬ್ಬಂದಿ ಮುಂಬೈಯ ನ್ಯಾಯಾಲಯವೊಂದರಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.





