ಲೋಕಸಭೆಯಲ್ಲಿ ಹಕ್ಕುಚ್ಯುತಿ ಸೂಚನೆಗಳ ಮುಖಾಮುಖಿ
ಹೊಸದಿಲ್ಲಿ,ಮಾ.1: ಹಕ್ಕುಚ್ಯುತಿ ಸೂಚನೆ ಯೊಂದಿಗೆ ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿಯವರನ್ನು ಹಣಿಯಲು ಸಜ್ಜಾಗಿರುವ ಕಾಂಗ್ರೆಸ್‌ಗೆ ಮಂಗಳವಾರ ಲೋಸಸಭೆಯಲ್ಲಿ ತಿರುಗೇಟು ನೀಡಿದ ಬಿಜೆಪಿ, ಸಚಿವ ಬಂಡಾರು ದತಾತ್ರೇಯ ಅವರ ವಿರುದ್ಧ ‘‘ಮಾನ ಹಾನಿಕರ’’ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಪ್ರತಿಪಕ್ಷದ ಮುಖ್ಯ ಸಚೇತಕ ಜ್ಯೋತಿರಾದಿತ್ಯ ಸಿಂದಿಯಾ ಅವರ ವಿರುದ್ಧವೂ ಇಂತಹುದೇ ಕ್ರಮಕ್ಕಾಗಿ ಆಗ್ರಹಿಸಿದೆ.
ದತ್ತಾತ್ರೇಯ ಅವರು, ಆತ್ಮಹತ್ಯೆ ಮಾಡಿಕೊಂಡಿರುವ ಹೈದರಾಬಾದ್ ವಿವಿಯ ದಲಿತ ವಿದ್ಯಾರ್ಥಿ ರೋಹಿತ ವೇಮುಲಾರನ್ನು ‘‘ದೇಶ ವಿರೋಧಿ, ಜಾತಿವಾದಿ ಮತ್ತು ಉಗ್ರ’’ಎಂದು ಕರೆದಿದ್ದರು ಎಂದು ಆರೋಪಿಸುವ ಮೂಲಕ ಸಿಂದಿಯಾ ಫೆ.24ರಂದು ಸದನದ ದಾರಿ ತಪ್ಪಿಸಿದ್ದರು ಎಂದು ಆಪಾದಿಸಿದ ಬಿಜೆಪಿಯ ಮುಖ್ಯ ಸಚೇತಕ ಅರ್ಜುನ ರಾಂ ಮೇಘವಾಲ್ ಅವರು,ತಾನು ಮತ್ತು ದತ್ತಾತ್ರೇಯ ಸೇರಿದಂತೆ ಇತರ ಹಲವು ಸದಸ್ಯರು ಸಿಂದಿಯಾ ವಿರುದ್ಧ ಹಕ್ಕುಚ್ಯುತಿಯ ಸೂಚನೆಯನ್ನು ನೀಡಿದ್ದೇವೆ ಎಂದರು.
ಮೇಘವಾಲ್ ಆರೋಪದಿಂದ ಕೆರಳಿದ ಕಾಂಗ್ರೆಸ್ ಸದಸ್ಯರು ಸದನದ ಬಾವಿಯ ಬಳಿಗೆ ಧಾವಿಸಿ ತಾವು ಸಲ್ಲಿಸಿರುವ ಹಕ್ಕುಚ್ಯುತಿ ಸೂಚನೆಯ ಬಗ್ಗೆ ನಿರ್ಧಾರವನ್ನು ಕೈಗೊಳ್ಳುವಂತೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರನ್ನು ಆಗ್ರಹಿಸಿದರು.
ವೇಮುಲಾ ಕುರಿತು ತಾನೆಂದೂ ಮಾಡಿರದ ಟೀಕೆಗಳನ್ನು ತನ್ನ ಬಾಯಿಯಲ್ಲಿ ಸೇರಿಸುವ ಮೂಲಕ ಸಿಂದಿಯಾ ತನ್ನನ್ನು ಅವಮಾನಿಸಿದ್ದಾರೆ ಮತ್ತು ತನ್ನ ವರ್ಚಸ್ಸಿಗೆ ಕಳಂಕ ತಂದಿದ್ದಾರೆ ಎಂದು ಆರೋಪಿಸಿದ ದತ್ತಾತ್ರೇಯ ಅವರು,ತನ್ನ ತಾಯಿ ಈರುಳ್ಳಿಯನ್ನು ಮಾರುತ್ತಿದ್ದರು. ತಾನು ಸದಾ ಒಬಿಸಿಗಳು ಮತ್ತು ದಲಿತರಿಗಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ ಎಂದು ತನ್ನ ಬಡತನದ ಹಿನ್ನೆಲೆಯನ್ನು ನೆನಪಿಸಿಕೊಂಡರು.
ಕಾಂಗ್ರೆಸ್ ಆರೋಪಿಸುತ್ತಿರುವಂತೆ ತಾನು ಸಚಿವೆ ಸ್ಮತಿ ಇರಾನಿಯವರಿಗೆ ಬರೆದಿದ್ದ ಪತ್ರದಲ್ಲಿ ವೇಮುಲಾರ ಹೆಸರನ್ನು ಉಲ್ಲೇಖಿಸಿರಲಿಲ್ಲ,ಅವರ ವಿರುದ್ಧ ಇಂತಹ ಆರೋಪಗಳನ್ನೆಂದೂ ಮಾಡಿರಲಿಲ್ಲ ಎಂದು ಅವರು ಹೇಳಿದರು.





