ಭಾರತದ ಮಹಿಳಾ ತಂಡ ನಾಲ್ಕನೆ ಸುತ್ತಿಗೆ ಪ್ರವೇಶ

ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್
ಕೌಲಾಲಂಪುರ,ಮಾ.1: ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳವಾರ ಭಾರತ ಮಿಶ್ರ ಫಲಿತಾಂಶ ಪಡೆದಿದೆ. ಪುರುಷರ ತಂಡ ಮೂರನೆ ಸುತ್ತಿನ ಪಂದ್ಯದಲ್ಲಿ ನೈಜೀರಿಯದ ವಿರುದ್ಧ ಶರಣಾಗಿದೆ. ಮಹಿಳಾ ತಂಡ ಪೋರ್ಚುಗಲ್‌ನ ವಿರುದ್ಧ ಗೆಲುವು ಸಾಧಿಸಿ ನಾಲ್ಕನೆ ಸುತ್ತಿಗೆ ತಲುಪಿದೆ.
ಸತತ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಅಚಂತ ಶರತ್ ಕಮಲ್ ನೇತೃತ್ವದ ಭಾರತ ತಂಡ ಉತ್ತಮ ಹೋರಾಟದ ನಿರೀಕ್ಷೆ ಮೂಡಿಸಿತ್ತು. ಆದರೆ, ಅಗ್ರ ರ್ಯಾಂಕ್‌ನ ನೈಜೀರಿಯ ತಂಡ ಭಾರತಕ್ಕೆ ಸವಾಲಾಗಿ ಪರಿಣಮಿಸಿತು.
ಸೌಮ್ಯಜಿತ್ ಘೋಷ್ ದಿನದ ಮೊದಲ ಪಂದ್ಯದಲ್ಲಿ ಅರುಣ ಖಾದ್ರಿ ವಿರುದ್ಧ 11-5, 11-4, 11-3 ಸೆಟ್‌ಗಳ ಅಂತರದಿಂದ ಸೋತರು. ಶರತ್ ಕಮಲ್ ನೈಜೀರಿಯದ ಸೆಗುನ್ ಟಾರಿಯೊಲಾ ವಿರುದ್ಧ ಆರಂಭದಲ್ಲಿ ಪೈಪೋಟಿ ನೀಡಿದರೂ ಅಂತಿಮವಾಗಿ 13-15, 6-11, 13-11, 5-11 ಸೆಟ್‌ಗಳ ಅಂತರದಿಂದ ಶರಣಾದರು.
ಎರಡು ಪಂದ್ಯಗಳಲ್ಲಿ ಸೋತ ಭಾರತ ತಂಡಕ್ಕೆ ಮತ್ತೆ ಚೇತರಿಸಿಕೊಳ್ಳಲು ಕಷ್ಟವಾಯಿತು. ಮೂರನೆ ಪಂದ್ಯದಲ್ಲಿ ಆಂಟನಿ ಅಮಲ್‌ರಾಜ್ ಉತ್ತಮ ಪ್ರದರ್ಶನ ನೀಡಲು ಯತ್ನಿಸಿದರೂ 13-11, 8-11, 9-11, 8-11 ಸೆಟ್‌ಗಳಿಂದ ಸೋತಿದ್ದಾರೆ.
ಭಾರತದ ಪುರುಷರ ತಂಡ ಲೀಗ್ ಹಂತದಲ್ಲಿ ಸ್ವಿಟ್ಝರ್ಲೆಂಡ್ ಹಾಗೂ ಸ್ಲೋವಾಕ್ ರಿಪಬ್ಲಿಕ್ ವಿರುದ್ಧ ಪಂದ್ಯವನ್ನು ಆಡಲು ಬಾಕಿಯಿದೆ. ಭಾರತದ ಮಹಿಳಾ ತಂಡ ಪೋರ್ಚುಗಲ್ ವಿರುದ್ಧದ 3ನೆ ಪಂದ್ಯವನ್ನು 3-0 ಅಂತರದಿಂದ ಗೆದ್ದುಕೊಂಡಿದೆ.
ಮೊದಲ ಪಂದ್ಯದಲ್ಲಿ ಮನಿಕಾ ಬಾತ್ರ ಪೋರ್ಚುಗಲ್‌ನ ಲೈಲಾ ಒಲಿವೆರಿರಾರನ್ನು 11-5, 7-11, 11-8, 9-11,11-9 ಸೆಟ್‌ಗಳ ಅಂತರದಿಂದ ಮಣಿಸಿದರು.
ಸೋಮವಾರ ನಿರಾಶಾದಾಯಕ ಪ್ರದರ್ಶನದಿಂದ ಹೊರ ಬಂದ ವೌಮಾ ದಾಸ್ ಅವರು ಕಾಟಿಯಾ ಮಾರ್ಟಿನ್ ವಿರುದ್ಧ 11-5, 11-9, 11-6 ನೇರ ಸೆಟ್‌ಗಳಿಂದ ಗೆಲುವು ಸಾಧಿಸಿದ್ದಾರೆ.
ಉತ್ತಮ ಪ್ರದರ್ಶನವನ್ನು ಮುಂದುವರಿಸಿದ ಕೆ. ಶಮಿನಿ ಅವರು ಪ್ಯಾಟ್ರಿಸಿಯ ಮಸೆಲ್‌ರನ್ನು 11-1, 11-4, 11-9 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.
ಭಾರತ ತಂಡ ನಾಲ್ಕನೆ ಸುತ್ತಿನಲ್ಲಿ ನೈಜೀರಿಯ ತಂಡವನ್ನು ಐದನೆ ಸುತ್ತಿನಲ್ಲಿ ಕ್ರೊವೇಷಿಯ ತಂಡವನ್ನು ಎದುರಿಸಲಿದೆ.







