ಕಿರುತೆರೆ ನಟಿ ನಿಗೂಢ ಸಾವು: ಕೊಲೆ ಶಂಕೆ
ಬೆಂಗಳೂರು, ಮಾ.1: ಕಿರುತೆರೆ ನಟಿಯೊಬ್ಬರು ನಿಗೂಢವಾಗಿ ಸಾವನಪ್ಪಿರುವ ದುರ್ಘಟನೆ ಇಲ್ಲಿನ ನಗರದ ಹೊರವಲಯ ನೆಲಮಂಗಲದ ಕಾಚೋಹಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಕಿರುತರೆ ನಟಿಯನ್ನು ಶ್ರುತಿ(24) ಎಂದು ಗುರುತಿಸಲಾಗಿದ್ದು, ಖಾಸಗಿ ವಾಹಿನಿಯೊಂದರಲ್ಲಿ ‘ಅವನು ಮತ್ತು ಶ್ರಾವಣಿ’ ಧಾರಾವಾಹಿಯಲ್ಲಿ ಸಣ್ಣ ಪಾತ್ರವೊಂದರಲ್ಲಿ ನಟಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.
ಸೋಮವಾರ ಮಧ್ಯಾಹ್ನ ಶ್ರುತಿಯ ಸ್ನೇಹಿತೆ ಶೂಟಿಂಗ್ ಇದೆ ಎಂದು ಕರೆದೊಯ್ದಿದ್ದಾರೆ. ಆದರೆ, ಸ್ನೇಹಿತೆ ಮನೆಯಲ್ಲಿಯೇ ನೇಣಿಗೆ ಶರಣಾದ ಸ್ಥಿತಿಯಲ್ಲಿ ಆಕೆಯ ಮೃತ ದೇಹ ಪತ್ತೆಯಾಗಿದೆ. ಅಲ್ಲದೆ, ಶ್ರೀಕಾಂತ್ ಎಂಬವರ ಜೊತೆ ಪಾರ್ಟಿಯೊಂದರಲ್ಲಿ ಸೋಮವಾರ ಶ್ರುತಿ ಪಾಲ್ಗೊಂಡಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಶಂಕಿಸಲಾಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ಒತ್ತಾಯ: ಶ್ರುತಿ ಅವರಿಗೆ ಉಮೇಶ್ ಎಂಬವರ ಜೊತೆ ಮದುವೆಯಾಗಿದ್ದು, ಹೆಣ್ಣು ಮಗುವೂ ಇದೆ ಎಂದು ಹೇಳಲಾಗುತ್ತಿದೆ. ಶ್ರುತಿಯ ಕುಟುಂಬಸ್ಥರು ಸಾವಿನ ಹಿಂದೆ ಯಾವುದೋ ಸಂಚು ಇದೆ ಎಂದು ಆರೋಪಿಸಿದ್ದು, ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.