ಎತ್ತಿನ ಹೊಳೆ ಯೋಜನೆಗೆ ಆಗ್ರಹಿಸಿ ನಾಳೆ ವಿಧಾನಸೌಧ ಮುತ್ತಿಗೆ
ಬೆಂಗಳೂರು, ಮಾ.1: ಬಯಲು ಸೀಮೆಗೆ ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನಕ್ಕೆ ತರುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯ ಸರಕಾರದ ಧೋರಣೆಯನ್ನು ಖಂಡಿಸಿ ಮಾ.3ರಂದು ಬೃಹತ್ ಟ್ರಾಕ್ಟರ್ ರ್ಯಾಲಿ ನಡೆಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ತಿಳಿಸಿದ್ದಾರೆ.
ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಯಲು ಸೀಮೆಗೆ ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕೆಂದು ಆಗ್ರಹಿಸಿ 162 ದಿನಗಳಿಂದ ಧರಣಿ ನಡೆಸಲಾಗುತ್ತಿದೆ. ಆದರೆ, ಸರಕಾರ ಮಾತ್ರ ನಿರ್ಲಕ್ಷ ಧೋರಣೆಯನ್ನು ಮುಂದು ವರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನೀರು ಕಲುಷಿತಗೊಂಡಿದೆ. ಈಗಾಗಲೆ ಈ ನೀರನ್ನು ಕುಡಿದು ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರು ವಿವಿಧ ಮಾರಣಾಂತಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಆದರೂ ಸರಕಾರ ಮಾತ್ರ ಇತ್ತ ಗಮನ ಕೊಡುತ್ತಿಲ್ಲ ಎಂದು ಅವರು ಆರೋಪಿಸಿದರು.
ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಕೋಲಾರ, ಚಿಕ್ಕ ಬಳ್ಳಾಪುರದ ರೈತರು ಶ್ರಮಜೀವಿಗಳಾಗಿದ್ದು, ನೀರಿಲ್ಲದ ಕಾರಣಕ್ಕಾಗಿ ಕೆಲಸವಿಲ್ಲದೆ ಪರಿತಪಿಸು ತ್ತಿದ್ದಾರೆ. ಹೀಗಾಗಿ ಈ ಭಾಗಕ್ಕೆ ಎತ್ತಿನ ಹೊಳೆ ನೀರನ್ನು ಒದಗಿಸುವ ಮೂಲಕ ಬರಪೀಡಿತ ಪ್ರದೇಶವನ್ನು ಹಸಿರಾಗಿಸಬೇಕೆಂದು ಅವರು ಒತ್ತಾಯಿಸಿದರು. ಈ ವೇಳೆ ಯುವ ಶಕ್ತಿಯ ಅಧ್ಯಕ್ಷ ವಿಜಯ್ ಬಾವರೆಡ್ಡಿ ಉಪಸ್ಥಿತರಿದ್ದರು.







