ಜೆರುಸಲೇಂ : ಫೆಲೆಸ್ತೀನ್ ಶಿಬಿರದಲ್ಲಿ ಇಸ್ರೇಲಿ ಸೈನಿಕರು, ನಿರಾಶ್ರಿತರ ನಡುವೆ ಘರ್ಷಣೆ
ಜೆರುಸಲೇಂ,ಮಾ.1: ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯ ಜೆರುಸಲೇಂ ಸಮೀಪದ ಕ್ವಾಲಾಂಡಿಯಾ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲಿ ಸೈನಿಕರು ಹಾಗೂ ಪೊಲೀಸ್ ಪಡೆಗಳ ನಡುವೆ ಮಂಗಳವಾರ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಮೃತಪಟ್ಟಿದ್ದು, ಇತರ 10 ಮಂದಿ ಗಾಯಗೊಂಡಿದ್ದಾರೆ.
ಇಬ್ಬರು ಗಡಿ ಕಾವಲುಗಾರರನ್ನು ಕೊಂಡೊಯ್ಯುತ್ತಿದ್ದ ಜೀಪೊಂದು ಮಧ್ಯರಾತ್ರಿಯ ಹೊತ್ತಿನಲ್ಲಿ ಪ್ರಮಾದವಶಾತ್ ಫೆಲೆಸ್ತೀನ್ ನಿರಾಶ್ರಿತ ಶಿಬಿರವನ್ನು ಪ್ರವೇಶಿಸಿದಾಗ ಘರ್ಷಣೆ ಭುಗಿಲೆದ್ದಿತೆಂದು ಪೊಲೀಸ್ ವಕ್ತಾರರೊಬ್ಬರು ತಿಳಿಸಿದ್ದಾರೆ. ಘರ್ಷಣೆಯಲ್ಲಿ ಐವರು ಪೊಲೀಸರಿಗೆ ಗಾಯಗಳಾಗಿರುವುದಾಗಿ ತಿಳಿದುಬಂದಿದೆ. ಕಳೆದ ಅಕ್ಟೋಬರ್‌ನಿಂದೀಚೆಗೆ ಇಸ್ರೇಲ್ ಹಾಗೂ ಫೆಲೆಸ್ತೀನ್ ಪ್ರಾಂತಗಳಲ್ಲಿ ಭುಗಿಲೆದ್ದ ಸರಣಿ ಹಿಂಸಾಚಾರದಲ್ಲಿ 178 ಫೆಲೆಸ್ತೀನಿಯರು, 28 ಇಸ್ರೇಲಿಗರು ಹಾಗೂ ಅಮೆರಿಕ, ಸೂಡಾನ್ ಮತ್ತು ಎರಿಟ್ರಿಯದ ತಲಾ ಓರ್ವ ಪ್ರಜೆ ಮೃತಪಟ್ಟಿದ್ದಾರೆ.
ಇಂದು ಜೆರುಸಲೇಂ ನಿರಾಶ್ರಿತ ಶಿಬಿರದಲ್ಲಿ ನಡೆದ ಘರ್ಷಣೆಯಲ್ಲಿ ಮೃತಪಟ್ಟ ವ್ಯಕ್ತಿ 22 ವರ್ಷ ವಯಸ್ಸಿನ ಎಯಾದ್ ಉಮರ್ ಸಾಜ್‌ದಿಯಾ ಎಂದು ಫೆಲೆಸ್ತೀನ್ ಆರೋಗ್ಯ ಸಚಿವಾಲಯ ಗುರು ತಿಸಿದೆ. ಆನಂತರ ಘರ್ಷಣೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಸೇನಾಧಿಕಾರಿಗಳನ್ನು ರಕ್ಷಿಸಲು ಸೇನಾಪಡೆಗಳು ಹಾಗೂ ಪೊಲೀಸ್ ಪಡೆಗಳನ್ನು ಸ್ಥಳಕ್ಕೆ ರವಾನಿಸಲಾಯಿತು.
ಆಳ ಸಾಗರದ ಅಲೆಗಳಿಂದ ಸುನಾಮಿ ಮುನ್ಸೂಚನೆ ಬಾಸ್ಟನ್, ಮಾ.1: ಆಳಸಮುದ್ರದ ಶಬ್ದದ ಅಲೆಗಳನ್ನು ಪತ್ತೆಹಚ್ಚಿ ಸುನಾಮಿಯ ಮುನ್ಸೂಚನೆಯನ್ನು ಅರಿತುಕೊಳ್ಳುವಂತಹ ವಿನೂತನ ವ್ಯವಸ್ಥೆಯೊಂದನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.
ಸುನಾಮಿ, ಚಂಡಮಾರುತ, ಭೂಕುಸಿತ ಅಷ್ಟೇಕೆ ಉಲ್ಕೆಗಳ ಪತನ ಕೂಡಾ ಧ್ವನಿಯುಕ್ತವಾದ ಗುರುತ್ವ ಅಲೆಗಳನ್ನು ಸೃಷ್ಟಿಸುತ್ತವೆ. ಈ ಅಲೆಗಳನ್ನು ಬಳಸಿಕೊಂಡು ಸುನಾಮಿ, ಚಂಡಮಾರುತಗಳ ಮುನ್ಸೂಚನೆ ಪಡೆಯಬಹುದು.





