ವಿಧವೆಗೆ ಲೈಂಗಿಕ ಕಿರುಕುಳ ಆರೋಪ: ಡಿಸಿಗೆ ದೂರು
ಬೆಂಗಳೂರು, ಮಾ.1: ಸರಕಾರಿ ಸೌಲಭ್ಯ ಮತ್ತು ಪರಿಹಾರ ಕೊಡಿಸುವುದಾಗಿ ನಂಬಿಸಿ ವಿಧವೆ ಯೊಬ್ಬರನ್ನು ವ್ಯಕ್ತಿಯೊಬ್ಬ ಮಂಚಕ್ಕೆ ಕರೆದಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕುರುಬನಾಳ ಗ್ರಾಮದಲ್ಲಿ ನಡೆದಿದೆ. ಕುರುಬನಾಳ ಗ್ರಾಮದ ಲೋಕಪ್ಪಎಂಬ ವ್ಯಕ್ತಿಯೊಬ್ಬ ಸರಕಾರಿ ಸೌಲಭ್ಯ ಕೊಡಿಸುವ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದು, ತನ್ನ ಚಪಲ ತೀರಿಸಿಕೊಳ್ಳಲು ಸೌಲಭ್ಯಗಳನ್ನು ಕೊಡಿಸುವ ನೆಪದಲ್ಲಿ ಫೀಸ್(ಲಂಚ) ಬದಲಿಗೆ ಗ್ರಾಮದ ವಿಧವೆಯರನ್ನು ಹಾಗೂ ಹೆಣ್ಣು ಮಕ್ಕಳನ್ನು ಮಂಚಕ್ಕೆ ಬಾ ಎಂದು ಕರೆದು ಇದೀಗ ಸಿಕ್ಕಿ ಬಿದ್ದಿದ್ದಾನೆ. ಈ ಮೊದಲು ಸಮಾಜಸೇವೆ ಹೆಸರಿನಲ್ಲಿ ಹಣ ಮಾಡುತ್ತಿದ್ದ ಲೋಕಪ್ಪ, ಅಬಲೆಯರನ್ನು ಲೈಂಗಿಕತೆಗೆ ಕರೆಯುವ ಚಟವನ್ನೂ ರೂಢಿಸಿಕೊಂಡು ಊರವರಿಂದ ಏಟು ತಿಂದಿದ್ದ ಎನ್ನಲಾಗಿದೆ. ಆದರೂ ತನ್ನ ಇದೇ ಚಾಳಿಯನ್ನು ಮುಂದುವರಿಸಿದ ಹಿನ್ನೆಲೆಯಲ್ಲಿ ಹಾಗೂ ವಿಧವೆ ಮಹಿಳೆ ಸುಮಂಗಲ ಎಂಬವರಿಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಲೋಕಪ್ಪನ ವಿರುದ್ಧ ಸುಮಂಗಲ ಅವರು ಜಿಲ್ಲಾಧಿಕಾರಿಗೆ ದೂರು ನೀಡಲು ಮುಂದಾಗಿದ್ದಾರೆ. ಓರಿಯಂಟಲ್ ಇನ್ಶೂರೆನ್ಸ್ ಕಂಪೆನಿಯ ಕಾಮಗಾರಿಯಲ್ಲಿ ವೀರೇಶ ತುಮರಿಗುದ್ದಿ, ಶರಣಪ್ಪಕಲ್ಲೋಡ್ಡಿ ಹಾಗೂ ಶರಣಪ್ಪಮರಿಗೌಡ ಎಂಬ ಮೂವರು ಕೂಲಿಕಾರರು ಟ್ರಾಕ್ಟರ್ ಪಲ್ಟಿಯಾಗಿ ಮೃತಪಟ್ಟಿದ್ದರು. ಮೃತರ ಪತ್ನಿಯರಿಗೆ ಕಾರ್ಮಿಕ ಇಲಾಖೆಯಿಂದ ಹಾಗೂ ಜಿಲ್ಲಾಧಿಕಾರಿಯಿಂದ ಪರಿಹಾರ ಕೊಡಿಸುತ್ತೇನೆಂದು ನಂಬಿಸಿ ಪ್ರತಿ ಯೊಬ್ಬರಿಂದಲೂ ಹತ್ತು ಸಾವಿರ ರೂ. ಹಣ ಪಡೆದಿದ್ದ ಎನ್ನಲಾಗಿದೆ. ಈ ಹಣವನ್ನು ನಾನು ಅಧಿಕಾರಿಗಳಿಗೆ ಕೊಟ್ಟಿದ್ದೇನೆ, ಇಷ್ಟರಲ್ಲಿ ನಿಮಗೆ ಕಾರ್ಮಿಕ ಇಲಾಖೆಯಿಂದ 2 ಲಕ್ಷ ರೂ. ಹಾಗೂ ಜಿಲ್ಲಾಧಿಕಾರಿ ಕಚೇರಿಯಿಂದ 50 ಸಾವಿರ ರೂಪಾಯಿ ಬರುತ್ತದೆ ಎಂದು ಸುಳ್ಳು ಹೇಳುತ್ತಲೇ ಕಳೆದ ಹತ್ತು ತಿಂಗಳಿನಿಂದ ಆಗಾಗ ಹಣ ಪೀಕುತ್ತಿದ್ದ. ಇದಲ್ಲದೆ ತನ್ನ ಚಪಲಕ್ಕಾಗಿ ಮೃತ ವೀರೇಶನ ಪತ್ನಿ ಸುಮಂಗಲ(ಹೆಸರು ಬದಲಾಯಿಸಿದೆ) ಎಂಬಾಕೆಯನ್ನು ಹಾಸಿಗೆಗೆ ಕರೆದಿದ್ದ ಎನ್ನಲಾಗಿದೆ. ಅಲ್ಲದೆ, ಆಗಾಗ ಕಿರುಕುಳ ನೀಡುವ ಲೋಕಪ್ಪಇತ್ತೀಚಿಗೆ ಆಕೆಯ ಮನೆಗೆ ಬಂದು ನಾನು ಕರೆದಲ್ಲಿ ಬರದಿದ್ದರೆ ನಿನಗೆ ಪರಿಹಾರ ಕೊಡಿಸುವುದಿಲ್ಲ ಎಂದು ಬೆದರಿಕೆ ಸಹ ಹಾಕಿದ್ದನಂತೆ. ಈ ಬಗ್ಗೆ ಆತ ಫೋನಿನಲ್ಲಿ ಮಂಚಕ್ಕೆ ಕರೆದ ಧ್ವನಿ ಕೂಡಾ ಮೊಬೈಲ್‌ನಲ್ಲಿ ರೆಕಾರ್ಡ್ ಆಗಿದೆ ಎನ್ನಲಾಗುತ್ತಿದೆ.
ಆರೋಪಿಯಿಂದ ಸಮಜಾಯಿಷಿ: ಕಾರ್ಮಿಕ ಇಲಾಖೆ ಯಿಂದ ಪರಿಹಾರಕ್ಕಾಗಿ ಖರ್ಚು ಎಂದು ಅವರಿಂದ ಹಣ ತೆಗೆದುಕೊಂಡಿದ್ದು ನಿಜ. ಆದರೆ ನಾನು ವಿಧವೆಯನ್ನು ಆ ದೃಷ್ಟಿಯಿಂದ ಕಂಡಿಲ್ಲವೆಂದು ಲೋಕಪ್ಪ ಇದೀಗ ಸಮಜಾ ಯಿಷಿ ನೀಡಿದ್ದಾನೆ. ಇವನ ಕಾಮದಾಟ ಹಾಗೂ ಮೋಸಕ್ಕೆ ಬಲಿಯಾದ ವಿಧವೆ ಸುಮಂಗಲ ಇದೀಗ ಲೋಕಪ್ಪನ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಲು ಮುಂದಾಗಿದ್ದಾಳೆ.





