ರಾಜ್ಯದಲ್ಲಿ ವಿದ್ಯಾಗ್ರಾಮಗಳ ನಿರ್ಮಾಣ: ಶಿಹಾಬ್ ತಂಙಳ್

ಬೆಂಗಳೂರು, ಮಾ.1: ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ ಸರ್ವತೋಮುಖ ಅಭಿವೃದ್ಧಿ ಸಾಧಿಸಿರುವ ಕೇರಳ ರಾಜ್ಯದ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ವಿದ್ಯಾಗ್ರಾಮಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಪಾಣಕ್ಕಾಡ್ ಸೈಯದ್ ಹಮೀದ್ ಅಲಿ ಶಿಹಾಬ್ ತಂಙಳ್ ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಲಾಗಿದ್ದ ಎಸ್ಕೆಎಸ್ಸೆಸ್ಸೆಫ್ ರಾಜ್ಯ ಘಟಕದ ಪ್ರತಿನಿಧಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಶಿಕ್ಷಣದ ಪ್ರಗತಿಯಿಂದಾಗಿ ಕೇರಳ ರಾಜ್ಯವು ಸರ್ವತೋಮುಖ ಅಭಿವೃದ್ಧಿ ಹಾಗೂ ಸಾಮರಸ್ಯ ಸಮಾಜ ನಿರ್ಮಾಣಕ್ಕೆ ಕಾರಣವಾಗಿದೆ ಎಂದರು.ಕೇರಳ ಮಾದರಿಯಲ್ಲಿ ಕರ್ನಾಟಕದ ಗ್ರಾಮಗಳಲ್ಲಿಯೂ ವಿದ್ಯಾಕೇಂದ್ರಗಳನ್ನು ಸ್ಥಾಪಿಸಿ ರಾಜ್ಯದಲ್ಲಿ ಸಾಮರಸ್ಯ ಸಮಾಜ ನಿರ್ಮಿಸುವ ಯೋಜನೆ ಎಸ್ಕೆಎಸ್ಸೆಸ್ಸೆಫ್ ನದ್ದಾಗಿದೆ. ವಿದ್ಯಾಸಂಪನ್ನ ಸಮಾಜದ ವಿರುದ್ಧ ಸ್ಪರ್ಧಿಸಲು ಮತ್ತು ಅವರನ್ನು ದ್ವೇಷಿಸಲು ಯಾರಿಗೂ ಸಾಧ್ಯವಾಗಲಾರದು ಎಂದು ಅವರು ಅಭಿಪ್ರಾಯಪಟ್ಟರು.ಎಸ್ಕೆಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಅಬ್ಬಾಸ್ ಫೈಝಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಪ್ರತಿನಿಧಿಗಳ ಸಮಾವೇಶದಲ್ಲಿ ಓಣಂಪಳ್ಳಿ ಮುಹಮ್ಮದ್ ಫೈಝಿ, ಮೌಲಾನ ಶರ್ಫುದ್ದೀನ್, ಕೆ.ಜುನೈದ್, ಯಾಕೂಬ್ ಅಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





