ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಮನು ಬಳಿಗಾರ್

ಬೆಂಗಳೂರು, ಮಾ.1: ಶತಮಾನೋತ್ಸವ ಸಂಭ್ರಮ ದಲ್ಲಿರುವ ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್‌ನ 25ನೆ ಅಧ್ಯಕ್ಷರಾಗಿ ಡಾ.ಮನು ಬಳಿಗಾರ್ ಆಯ್ಕೆಯಾಗಿದ್ದು, ಬುಧವಾರ (ಮಾ.2) ಅಧಿಕೃತವಾಗಿ ಘೋಷಣೆಯಾಗಬೇಕಿದೆ.
ಕನ್ನಡ ಸಾಹಿತ್ಯ ಪರಿಷತ್‌ನ ಚುನಾವಣಾ ಇತಿಹಾಸದಲ್ಲೇ 60,839 ಮತಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ನಿರ್ದೇಶಕ ಮನು ಬಳಿಗಾರ್ ಪಡೆಯುವ ಮೂಲಕ ಜಯದಲ್ಲೂ ದಾಖಲೆ ಬರೆದಿದ್ದಾರೆ. ಹತ್ತಿರದ ಪ್ರತಿಸ್ಪರ್ಧಿ ಜಯಪ್ರಕಾಶ್ ಗೌಡ 22,908 ಮತಗಳನ್ನು ಗಳಿಸಿದರೆ, ಬಳಿಗಾರ್ 37,931 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
2012ರಲ್ಲಿ ಪ್ರೊ.ಚಂದ್ರಶೇಖರ ಪಾಟೀಲ ವಿರುದ್ಧ 9,000 ಮತಗಳ ಅಂತರದಿಂದ ಪುಂಡಲೀಕ ಹಾಲಂಬಿ ಜಯ ಗಳಿಸಿದ್ದು, ಇದುವರೆಗಿನ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ದಾಖಲೆಯಾಗಿತ್ತು. ಈಗ ಮನು ಬಳಿಗಾರ್ ಅತ್ಯಧಿಕ ಮತಗಳ ಅಂತರದಿಂದ ಗೆದ್ದಿರುವುದು, ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾಗಿ ಮಾಡಿದ ಸೇವೆ, ಸಾಹಿತ್ಯ ಕ್ಷೇತ್ರದಲ್ಲಿನ ಕೊಡುಗೆಗಳು, ಜಿಲ್ಲಾ ಘಟಕಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದು ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.





