ಐಸಿಸ್ ಜೊತೆ ನಂಟು:24 ಶಂಕಿತರ ಬಂಧನ

ಹೊಸದಿಲ್ಲಿ,ಮಾ.1: ಐಸಿಸ್ ಜೊತೆ ನಂಟು ಹೊಂದಿರುವ ಶಂಕೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯು 24 ಜನರನ್ನು ಬಂಧಿಸಿದೆ ಮತ್ತು ಭಾರತದಲ್ಲಿ ಈ ಸಂಘಟನೆಗೆ ಹಣಕಾಸು ಹೆಚ್ಚಾಗಿ ಸ್ವಯಂ ಹಣಕಾಸು ವ್ಯವಸ್ಥೆಯ ಮೂಲಕ ಪಾವತಿಯಾಗುತ್ತಿದೆ ಎಂದು ಸಹಾಯಕ ಗೃಹಸಚಿವ ಹರಿಭಾಯಿ ಪಾರ್ಥಿಭಾಯಿ ಚೌಧರಿ ಅವರು ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದರು.
ಎನ್‌ಐಎ ತಾನು ತನಿಖೆ ನಡೆಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಈವರೆಗೆ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ತಲಾ ಏಳು,ತೆಲಂಗಾಣದಲ್ಲಿ ನಾಲ್ವರು,ಉತ್ತರ ಪ್ರದೇಶದಲ್ಲಿ ಮೂವರು ಹಾಗೂ ಜಮ್ಮು-ಕಾಶ್ಮೀರ,ಮಧ್ಯಪ್ರದೇಶ ಮತ್ತು ತಮಿಳುನಾಡುಗಳಲ್ಲಿ ತಲಾ ಓರ್ವ ಶಂಕಿತರನ್ನು ಬಂಧಿಸಿದೆ ಎಂದು ಅವರು ಲಿಖಿತ ಉತ್ತರವೊಂದರಲ್ಲಿ ತಿಳಿಸಿದರು.
ಭಾರತದಲ್ಲಿ ಐಸಿಸ್‌ಗೆ ಆರ್ಥಿಕ ನೆರವು ಹೆಚ್ಚಾಗಿ ಸ್ವಯಂ ಹಣಕಾಸು ವ್ಯವಸ್ಥೆಯ ಮೂಲಕ ಹರಿದು ಬರುತ್ತಿದೆಯಾದರೂ ಹವಾಲಾ ಮಾರ್ಗವನ್ನೂ ಬಳಸಿಕೊಂಡಿರುವ ಒಂದೆರಡು ನಿದರ್ಶನಗಳಿವೆ ಎಂದರು.
ಐಸಿಸ್ ವಿಶ್ವಾದ್ಯಂತದ ಯುವಕರನ್ನು ಸೇರಿಸಿಕೊಳ್ಳುತ್ತಿದೆಯಾದರೂ ಭಾರತದಲ್ಲಿ ಕೆಲವೇ ಯುವಕರ ಮೇಲೆ ಪ್ರಭಾವ ಬೀರಲು ಅದಕ್ಕೆ ಸಾಧ್ಯವಾಗಿದೆ ಎಂದು ಅವರು ತಿಳಿಸಿದರು. ಐಸಿಸ್ ತನ್ನ ಸಿದ್ಧಾಂತದ ಪ್ರಸಾರಕ್ಕಾಗಿ ಅಂತರ್ಜಾಲವನ್ನು ಬಳಸಿಕೊಳ್ಳುತ್ತಿದ್ದು, ಅದಕ್ಕೆ ಸೇರ್ಪಡೆಗೊಳ್ಳುವ ಸಂಭವನೀಯರನ್ನು ಗುರುತಿಸಲು ಗುಪ್ತಚರ ಮತ್ತು ಭದ್ರತಾ ಸಂಸ್ಥೆಗಳು ನಿಕಟ ನಿಗಾ ಇರಿಸಿವೆ. ಅಂತಹವರ ಮೇಲೆ ಕಣ್ಣಿಡಲಾಗುತ್ತಿದ್ದು,ಅಗತ್ಯವಾದರೆ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತವೆ ಎಂದರು. ಐಸಿಸ್ ಬೆದರಿಕೆಯನ್ನು ನಿಭಾಯಿಸಲು ರಾಷ್ಟ್ರೀಯ ಕಾರ್ಯತಂತ್ರವೊಂದನ್ನು ರೂಪಿಸುವ ಪ್ರಕ್ರಿಯ ಪ್ರಗತಿಯಲ್ಲಿದೆ ಎಂದೂ ಸಚಿವರು ತಿಳಿಸಿದರು.







