ಅಲಿಗಢ್ ಮುಸ್ಲಿಂ ವಿವಿಯ ಕ್ಯಾಂಪಸ್ ಕೇಂದ್ರಗಳನ್ನು ಮುಚ್ಚುವ ಬೆದರಿಕೆ ಹಾಕಿದ ಸ್ಮೃತಿ ಇರಾನಿ
ವಿವಿಯ ಉಪಕುಲಪತಿಯನ್ನು ಅವಮಾನಿಸಿದ ಸಚಿವೆ

ಹೊಸದಿಲ್ಲಿ ,ಮಾ.1 : ಮಲಪ್ಪುರಮ್ ನಲ್ಲಿ ಅಲಿಗಡ್ ಮುಸ್ಲಿಂ ವಿವಿ (ಎ ಎಂ ಯು )ಯ ಕೇಂದ್ರ ಪ್ರಾರಂಭಿಸುವ ಬಗ್ಗೆ ಸಹಕಾರ ನೀಡಲು ಕೋರಿ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರನ್ನು ಭೇಟಿಯಾದ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ನೇತೃತ್ವದ ಸಂಸದರ ನಿಯೋಗವೊಂದು ಜನವರಿಯಲ್ಲಿ ಭೇಟಿಯಾಗಿತ್ತು. ಈ ಸಂದರ್ಭದಲ್ಲಿ " ಈ ಕೇಂದ್ರ ಹಾಗು ಎ ಎಂ ಯು ನ ಇತರ ಕೇಂದ್ರಗಳು ಯಾವುದೇ ಕಾನೂನಿನ ಪ್ರಕಾರ ಸ್ಥಾಪನೆಯಾಗಿಲ್ಲ. ಹಾಗಾಗಿ ಅವುಗಳನ್ನು ಮುಚ್ಚಲಾಗುವುದು" ಎಂದು ಒರಟಾಗಿ ಹೇಳಿ ಕಳಿಸಿದ್ದಾರೆಂದು ಮಿಲ್ಲಿ ಗ್ಯಾಜ್ಹೆಟ್ ನಿಯತಕಾಲಿಕ ವರದಿ ಮಾಡಿದೆ.
" ಇಂತಹ ಕೇಂದ್ರವನ್ನು ನೀವು ಹೇಗೆ ಪ್ರಾರಂಭಿಸುತ್ತೀರಿ ? ಹೀಗೆ ಮಾಡಲು ವಿಸಿ (ಉಪಕುಲಪತಿ ) ಗೆ ಯಾವ ಅಧಿಕಾರವಿದೆ ? ನಾವು ಇದಕ್ಕೆ ಹಣ ಕೊಡುವುದಿಲ್ಲ . ಎ ಎಂ ಯು ಕೇಂದ್ರಗಳ ಅಗತ್ಯವೇ ಇಲ್ಲ. ಇವುಗಳನ್ನು ನಾವು ಮುಚ್ಚುತ್ತೇವೆ. ಇದಕ್ಕಾಗಿ ನಾವು ಯಾವುದೇ ಹಣ ಕೊಡುವುದಿಲ್ಲ " ಎಂದು ಈ ಸಂದರ್ಭದಲ್ಲಿ ಸ್ಮೃತಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
"ಪೆರಿಂದಲ್ ಮನ್ನ ತಾಲೂಕಿನಲ್ಲಿ ಪೂರ್ಣ ಪ್ರಮಾಣದ ಎ ಎಂ ಯು ಕೇಂದ್ರ ಸ್ಥಾಪನೆಗಾಗಿ ನಾವು ೩೪೫ ಎಕರೆ ಸ್ಥಳ ಮಂಜೂರು ಮಾಡಿದ್ದೇವೆ " ಎಂದು ಉಮ್ಮನ್ ಚಾಂಡಿ ಹೇಳಿದಾಗ " ಅದನ್ನು ವಾಪಸ್ ತೆಗೆದುಕೊಳ್ಳಿ " ಎಂದು ಖಡಕ್ಕಾಗಿ ಹೇಳಿಬಿಟ್ಟರು ಸ್ಮೃತಿ ಎಂದು ವರದಿಯಾಗಿದೆ.
ಮುಖ್ಯಮಂತ್ರಿ ನೇತೃತ್ವದ ನಿಯೋಗದೊಂದಿಗೆ ಸಚಿವೆ ಹೀಗೆ ಒರಟಾಗಿ ಮಾತನಾಡುತ್ತಿರುವಾಗ , ಎ ಎಂ ಯು ಉಪಕುಲಪತಿ ಲೆ . ಜ. ( ನಿವೃತ್ತ) ಝಮೀರುದ್ದೀನ್ ಅಲ್ಲಿಗೆ ಬಂದರು. ಅವರನ್ನು ಕಂಡ ಕೂಡಲೇ ಸಿಡಿಮಿಡಿಗೊಂಡ ಸ್ಮೃತಿ " ನೀವು ಯಾಕೆ ಇಲ್ಲಿಗೆ ಬಂದಿರಿ ?" ಎಂದು ಕೇಳಿದ್ದಾರೆ. ಅವರು ವಿನಯವಾಗಿ " ಮೇಡಂ, ಮುಖ್ಯಮಂತ್ರಿಯವರು ಕರೆದಿದ್ದಕ್ಕೆ ಬಂದಿದೆ " ಎಂದು ಹೇಳಿದರು. ಅದಕ್ಕೆ ಕೆಂಡಾಮಂಡಲ ವಾದ ಸ್ಮೃತಿ " ನಿಮಗೆ ವೇತನ ಕೊಡುವುದು ಯಾರು ? ಕೇರಳ ಮುಖ್ಯಮಂತ್ರಿಯೇ ಅಥವಾ ಎಚ್ ಆರ್ ಡಿ ಸಚಿವಾಲಯವೇ ? ವಾಪಸ್ ಹೋಗಿ ನಿಮ್ಮ ರೂಮಲ್ಲಿ ಕುಳಿತುಕೊಳ್ಳಿ " ಎಂದು ಅವರನ್ನು ಅವಮಾನಿಸಿದರು. ಅವರು ಮರು ಮಾತನಾಡದೆ ಅಲ್ಲಿಂದ ತೆರಳಿದರು. ಇದನ್ನು ಕೇರಳ ಮುಖ್ಯಮಂತ್ರಿ ಚಾಂಡಿ ಹಾಗು ಸಂಸದರು ಮೂಕಪ್ರೇಕ್ಷಕರಾಗಿ ನೋಡಿ ಕುಳಿತುಕೊಳ್ಳಬೇಕಾಯಿತು.
ಎ ಎಂ ಯು ಕೇಂದ್ರವನ್ನು ಉಪಕುಲಪತಿ ಏಕಪಕ್ಷೀಯವಾಗಿ ಪ್ರಾರಂಭಿಸಿದ್ದಾರೆ ಎಂಬಂತೆ ಸ್ಮೃತಿ ವರ್ತಿಸಿದರು. ಆದರೆ ಈ ಕೇಂದ್ರಗಳನ್ನು ಸಾಚಾರ್ ವರದಿ ಬಂಡ ಬಳಿಕ ಕೇಂದ್ರ ಸರಕಾರವೇ ಅಲ್ಪ ಸಂಖ್ಯಾತರ ಶೈಕ್ಷಣಿಕ ಅಭಿವೃದ್ಧಿಗಾಗಿ ಪ್ರಾರಂಭಿಸಿತ್ತು ಎಂಬುದು ಗಮನಾರ್ಹ.







