ನನ್ನ ಹಿರಿತನದ ಆಧಾರದ ಮೇಲೆ ಮಂತ್ರಿಯಾಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮರ್ಜಿಯಿಂದಲ್ಲ
ಕಂದಾಯ ಸಚಿವ ವಿ. ಶ್ರೀನಿವಾಸ ಪ್ರ ಸಾದ್ ಅವರಿಂದ ತಿರುಗೇಟು

ಬೆಂಗಳೂರು.ಮಾ.1: ರಾಜ್ಯ ಸರ್ಕಾರದಲ್ಲಿ ನನ್ನ ಹಿರಿತನದ ಆಧಾರದ ಮೇಲೆ ಮಂತ್ರಿಯಾಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮರ್ಜಿಯಿಂದಲ್ಲ ಎಂದು ಕಂದಾಯ ಸಚಿವ ವಿ. ಶ್ರೀನಿವಾಸ ಪ್ರ ಸಾದ್ ಇಂದಿಲ್ಲಿ ತಿರುಗೇಟು ನೀಡಿದ್ದಾರೆ.
ನಾನು ಹಿರಿಯನಾಗಿದ್ದರಿಂದ ನನ್ನ ಇರುವಿಕೆಯಿಂದ ಸಚಿವ ಸಂಪುಟಕ್ಕೆ ಶಕ್ತಿ ಬಂದಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಅದಕ್ಷರು. ಹೀಗಾಗಿ ನಿಮ್ಮನ್ನು ಸಂಪುಟದಿಂದ ತೆಗೆದುಹಾಕಬೇಕು ಎಂದು ಮಾಜಿ ಸಚಿವ ವಿಶ್ವನಾಥ್ ಹೇಳಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, ನಾನು ಪ್ರಧಾನ ಮಂತ್ರಿಯಾಗಿದ್ದ ವಾಜಪೇಯಿ ಅವರ ಸರ್ಕಾರದಲ್ಲಿ ಮಂತ್ರಿಯಾಗಿದ್ದವನು. ಹೀಗಾಗಿ ನನಗೆ ಮಂತ್ರಿಗಿರಿ ಕೊಡಿಸಿದವರು ಸಿದ್ಧರಾಮಯ್ಯ ಅವರು ಎಂದು ಭಾವಿಸುವ ಅಗತ್ಯವಿಲ್ಲ. ನನ್ನ ಹಿರಿತನಕ್ಕೆ ಪೂರಕವಾಗಿ ನನಗೆ ಈ ಜಾಗ ಸಿಕ್ಕಿದೆಯೇ ಹೊರತು ಬೇರ್ಯಾವ ಕಾರಣಕ್ಕೂ ಅಲ್ಲ ಎಂದರು.
ಮಾಜಿ ಸಚಿವ ವಿಶ್ವನಾಥ್ ಅವರಿಗೆ ಸದಾ ಕಾಲ ಯಾರನ್ನಾದರೂ ಬೈಯ್ಯುತ್ತಲೇ ಇರುವುದು ಅಭ್ಯಾಸವಾಗಿ ಹೋಗಿದೆ.ಹೀಗಾಗಿ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದರು.
ಒಂದು ಕಾಲದಲ್ಲಿ ಎಸ್.ಎಂ.ಕೃಷ್ಣ ಅವರನ್ನು ಬೈದುಕೊಂಡು ತಿರುಗಾಡುತ್ತಾ ಸಿದ್ಧರಾಮಯ್ಯ ಅವರನ್ನು ಪಕ್ಷಕ್ಕೆ ಕರೆದುಕೊಂಡು ಬರಬೇಕು ಎಂದು ತಿರುಗುತ್ತಿದ್ದವರು ವಿಶ್ವನಾಥ್.ಈಗ ಏನು ಮಾಡುತ್ತಿದ್ದಾರೆ ನೀವೇ ನೋಡುತ್ತಿದ್ದೀರಲ್ಲ?ಎಂದು ಮಾರ್ಮಿಕವಾಗಿ ನುಡಿದರು.
ಇದೇ ರೀತಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಸೋತಾಗ ರಾಹುಲ್ ಗಾಂಧಿ ಅವರನ್ನು ಸೈಡಿಗೆ ಸರಿಸಿ ಪ್ರಿಯಾಂಕಾ ಗಾಂಧಿಯವರನ್ನು ಪಕ್ಷದ ಮುಂಚೂಣಿಗೆ ತರಬೇಕು ಎಂದು ಹೇಳಿದವರೂ ಇವರೇ.
ಹೀಗೆ ಅವರಿಗೆ ಇನ್ನೊಬ್ಬರನ್ನು ಬೈದುಕೊಂಡು ತಿರುಗುವುದು ಅಭ್ಯಾಸವಾಗಿ ಹೋಗಿದೆ.ಹೀಗೆ ಭೈಯ್ಯಲು ಯಾರೂ ಸಿಗದಿದ್ದರೆ ವಿಶ್ವನಾಥ್,ತಮ್ಮ ಮನೆಯಲ್ಲೇ ಯಾರನ್ನಾದರೂ ಬೈದುಕೊಂಡು ತಿರುಗುತ್ತಾರೆ ಎಂದು ವ್ಯಂಗ್ಯವಾಡಿದರು.
ಈ ಮಧ್ಯೆ ಸುದ್ದಿಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಮಾಜಿ ಸಚಿವ ಹೆಚ್.ವಿಶ್ವನಾಥ್, ರಾಜ್ಯದ ಪ್ರಜೆಯಾಗಿ ಯಾರು ಚೆನ್ನಾಗಿ ಕೆಲಸ ಮಾಡುತ್ತಿಲ್ಲ.ಅಂತವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಹೇಳುವ ಹಕ್ಕು ನನಗಿದೆ ಎಂದರು.
ವಿಶ್ವನಾಥ್ ಅವರಿಗೆ ಮದ್ದು ಹಾಕುವ ಚಾಳಿ ಇದೆ ಎಂದು ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.ನಾನು ಹಾಕಿದ ಯಾವ ಮದ್ದು ಅವರ ವಿರುದ್ಧ ಕೆಲಸ ಮಾಡಿದೆ?ಮೊದಲು ಅದನ್ನವರು ಹೇಳಲಿ ಎಂದು ಟೀಕಿಸಿದರು.







