ಮೈಸೂರು ಜಿಲ್ಲಾ ಪಂಚಾಯತ್ ಅಧಿಕಾರ ಪರಸ್ಪರ ಕೈ ಜೋಡಿಸಲು ಬಿಜೆಪಿ ಹಾಗೂ ಜೆಡಿಎಸ್ ಚಿಂತನೆ
ಬೆಂಗಳೂರು.ಮಾ.1: ಮೈಸೂರು ಜಿಲ್ಲಾ ಪಂಚಾಯತ್ ಅಧಿಕಾರ ಹಿಡಿಯಲು ಪರಸ್ಪರ ಕೈ ಜೋಡಿಸಲು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯತಂತ್ರ ರೂಪಿಸಿವೆ.
ಮೈಸೂರು ಜಿಲ್ಲಾ ಪಂಚಾಯ್ತಿಗೆ ಆಯ್ಕೆಯಾದ ಉಭಯ ಪಕ್ಷಗಳ ಜನಪ್ರತಿನಿಧಿಗಳು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳೇ ಪರಸ್ಪರ ಕೈಗೂಡಿಸಬೇಕು ಎಂಬ ಅಭಿಪ್ರಾಯಕ್ಕೆ ಬಂದಿವೆ ಎನ್ನಲಾಗಿದೆ.
ತಮ್ಮ ಈ ಅಭಿಪ್ರಾಯವನ್ನು ಉಭಯ ಪಕ್ಷಗಳ ಜನಪ್ರತಿನಿಧಿಗಳೂ ವರಿಷ್ಟರಿಗೆ ನೇರವಾಗಿ ತಿಳಿಸಿದ್ದು ಅವರ ಅಭಿಪ್ರಾಯವನ್ನೇ ಮುಖ್ಯವಾಗಿ ಪರಿಗಣಿಸಿರುವ ಉಭಯ ಪಕ್ಷಗಳ ನಾಯಕರು,ಪರಸ್ಪರ ಕೈಗೂಡಿಸಲು ಸಹಮತ ವ್ಯಕ್ತಪಡಿಸಿದ್ದಾರೆ.
ಮೈಸೂರು ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಯಾವ ಜಾತಿ, ಪಂಗಡಗಳಿಗೆ ನಿಗದಿ ಮಾಡಿದರೂ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಆಯಾ ಜಾತಿ,ಪಂಗಡಗಳ ಪ್ರತಿನಿಧಿಗಳಿದ್ದಾರೆ.
ಹೀಗಾಗಿ ಸರ್ಕಾರ ಮೀಸಲಾತಿಯನ್ನು ನಿಗದಿ ಮಾಡುವಾಗ ಏನೇ ಆಟ ಆಡಲು ಹೋದರೂ ಮೆಸೂರು ಜಿಲ್ಲಾ ಪಂಚಾಯ್ತಿಯನ್ನು ಕಾಂಗ್ರೆಸ್ ಕೈಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಮೂಲಗಳು ಸ್ಪಷ್ಟ ಪಡಿಸಿವೆ. ಈ ಮಧ್ಯೆ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಒಡೆಯಲು ಹುನ್ನಾರ ನಡೆಸಿದ್ದು ಹೀಗಾಗಿ ಎಚ್ಚರದಿಂದಿರುವಂತೆ ಜೆಡಿಎಸ್ ನಾಯಕರು ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.







