ಉಪ್ಪಿನಂಗಡಿ: ಲಂಚ ನೀಡದಕ್ಕೆ ಲಾರಿ ಚಾಲಕರಿಗೆ ಕಿರುಕುಳ ಆರೋಪ ವಾಣಿಜ್ಯ ತೆರಿಗೆ ಇಲಾಖೆಯ ವಿರುದ್ಧ ಸಾರ್ವಜನಿಕರ ಆಕ್ರೋಶ

ಉಪ್ಪಿನಂಗಡಿ: ಲಂಚ ಕೊಡಲು ನಿರಾಕರಿಸಿದ್ದಕ್ಕೆ ಎರಡು ಲಾರಿಗಳನ್ನು ವಾಣಿಜ್ಯ ತೆರಿಗೆ ಅಧಿಕಾರಿಗಳು ಬೆಳಗ್ಗಿನಿಂದ ಸಂಜೆಯವರೆಗೆ ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ ಸಾರ್ವಜನಿಕರು ಅಧಿಕಾರಿಗಳ ಕ್ರಮದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ ಘಟನೆ ಉಪ್ಪಿನಂಗಡಿಯಲ್ಲಿ ಮಂಗಳವಾರ ನಡೆದಿದೆ. ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಅಧಿಕಾರಿಗಳು ಬಳಿಕ ಲಾರಿಗಳನ್ನು ಪೊಲೀಸ್ ಠಾಣೆಯ ಬಳಿಯಿಟ್ಟು ರಾತ್ರಿ ಪರಿಶೀಲನೆ ನಡೆಸಿದ ಬಳಿಕ ಮುಂದಿನ ಪ್ರಕ್ರಿಯೆ ನಡೆಸುವುದಾಗಿ ತಿಳಿಸಿದ್ದಾರೆ.
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಪಂಜಳದ ಬಳಿ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಕಮಿಷನರ್ ರುದ್ರಪ್ಪ ನೇತೃತ್ವದ ಅಧಿಕಾರಿಗಳ ತಂಡ ಅಸೈಗೋಳಿಯಿಂದ ಬೆಂಗಳೂರಿಗೆ ಪ್ಲೈವುಡ್ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಬೆಳಗ್ಗೆ 10:30ಯ ಸುಮಾರಿಗೆ ವಶಕ್ಕೆ ಪಡೆದುಕೊಂಡಿತ್ತು. ಆದರೆ ಸಂಜೆಯವರೆಗೆ ಲಾರಿಯನ್ನು ತಪಾಸಣೆ ನಡೆಸದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಧಿಕಾರಿಗಳು ತಮ್ಮ ಜೀಪು ಹೋದ ಕಡೆಗೆಲ್ಲಾ ಲಾರಿಗಳನ್ನು ಸುತ್ತಾಡಿಸುತ್ತಿದ್ದ ವಿಷಯ ತಿಳಿದ ಸಾರ್ವಜನಿಕರು ಉಪ್ಪಿನಂಗಡಿ ಬಳಿಯ ಗಾಂಧಿಪಾರ್ಕ್ ಬಳಿ ಜಮಾಯಿಸಿ, ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಮಣಿದ ಅಧಿಕಾರಿಗಳು ಕೊನೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಬಳಿ ಲಾರಿಗಳನ್ನು ನಿಲ್ಲಿಸಿದ್ದು, ಪ್ಲೈವುಡ್‌ನ ಮಾಲಕರನ್ನು ಸ್ಥಳಕ್ಕೆ ಕರೆಸಿದ್ದಾರೆ. ಅವರು ಬಂದ ಬಳಿಕ ಅವರ ಎದುರು ಲಾರಿಯಲ್ಲಿದ್ದ ಸರಕನ್ನು ತೆಗೆದು ತಪಾಸಣೆ ನಡೆಸುವುದಾಗಿ ತಿಳಿಸಿದ್ದಾರೆ.
ಲಂಚದ ಆರೋಪ: ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಮುಸ್ತಾಪ ಹಾಗೂ ಮನೋಜ್, ಲಂಚ ಕೊಡಲು ನಿರಾಕರಿಸಿದ್ದಕ್ಕೆ ಅಧಿಕಾರಿಗಳು ಈ ರೀತಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದು, ಬೆಳಗ್ಗೆ 10:30ಕ್ಕೆ ಲಾರಿ ವಶಪಡಿಸಿಕೊಂಡು ಬಿಲ್ ಕೇಳಿದ್ದಾರೆ. ಬಿಲ್ ಕೊಟ್ಟಾಗ ಇದರಲ್ಲಿ ನಿಗದಿತ ಬಾರಕ್ಕಿಂತ ಹೆಚ್ಚು ಸರಕು ಇರುವ ಬಗ್ಗೆ ಸಂಶಯವಿದೆ. ಆದ್ದರಿಂದ ಒಂದೊಂದು ಲಾರಿಗೆ ಏಳು ಸಾವಿರ ರೂಪಾಯಿ ಲಂಚ ಕೊಡಬೇಕು ಎಂದು ಬೇಡಿಕೆಯಿಟ್ಟರು. ಇದಕ್ಕೆ ನಾವು ನಿರಾಕರಿಸಿದ್ದು, ಬೇಕಾದರೆ ನೀವು ಇದರಲ್ಲಿರುವ ಪ್ಲೈವುಡ್ ಅನ್ನು ತಪಾಸಣೆ ನಡೆಸಿ, ಇದರಲ್ಲಿ ಹೆಚ್ಚಿಗೆ ಇಲ್ಲ. ಬಿಲ್‌ನಲ್ಲಿದ್ದಷ್ಟೇ ಇದೆ ಎಂದೆವು. ಆದರೂ ಹಠ ಬಿಡದ ಅವರು ನಮ್ಮ ಡ್ರೈವಿಂಗ್ ಲೈಸನ್ಸ್, ಹೊಗೆ ತಪಾಸಣಾ ಪತ್ರ ಮುಂತಾದ ಸಾರಿಗೆ ಇಲಾಖೆಗೆ ಸಂಬಂಧಿಸಿದ ದಾಖಲೆಗಳನ್ನು ಕೇಳಿದರು. ವಾಣಿಜ್ಯ ತೆರಿಗೆ ಇಲಾಖೆಗೆ ಸಂಬಂಧಪಡದ ದಾಖಲೆಗಳನ್ನು ಯಾಕೆ ಕೇಳುತ್ತೀರೆಂದು ನಾವು ಪ್ರಶ್ನಿಸಿದಾಗ ನಮ್ಮನ್ನೇ ಅವರು ದಬಾಯಿಸಿದ್ದು, ಬೆಳಗ್ಗಿನಿಂದ ಸಂಜೆಯವರೆಗೆ ಅವರ ಜೀಪು ಎಲ್ಲೆಲ್ಲಿ ಹೋಗುತ್ತದೋ ಅಲ್ಲಿಗೆ ನಮ್ಮ ಲಾರಿಗಳನ್ನು ತೆಗೆದುಕೊಂಡು ಬರಲು ತಿಳಿಸಿದರು. ನಾವು ನಮ್ಮ ಲಾರಿಗಳನ್ನು ತಪಾಸಣೆ ಮಾಡಿ ಬಿಡಿ ಎಂದು ಅವರಲ್ಲಿ ಅಂಗಲಾಚಿದರೂ ಅವರು ಲಾರಿಗಳ ತಪಾಸಣೆ ನಡೆಸಲೇ ಇಲ್ಲ. ಕೊನೆಗೆ ಈ ವಿಷಯ ತಿಳಿದ ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬಳಿಕ ತಪಾಸಣೆ ಮಾಡುತ್ತೇವೆಂದು ಇಲ್ಲಿಗೆ ಕರೆದುಕೊಂಡು ಬಂದು ಲಾರಿಗಳನ್ನು ನಿಲ್ಲಿಸಿದ್ದಾರೆ ಎಂದು ತಿಳಿಸಿದರು.
ಲಾರಿಗಳನ್ನು ಅವರು ತಪಾಸಣೆ ನಡೆಸಲಿ. ಆದರೆ ತಪಾಸಣೆಯ ನೆಪದಲ್ಲಿ ನಮಗೆ ಕಿರುಕುಳ ನೀಡುವುದು ಸರಿಯಲ್ಲ. ಲಾರಿಯಲ್ಲಿ ಲಕ್ಷಾಂತರ ರೂಪಾಯಿ ವೌಲ್ಯದ ಪ್ಲೈವುಡ್‌ಗಳಿದ್ದು, ಅದಕ್ಕೆ ಹಾಕಲಾಗಿದ್ದ ಟರ್ಪಾಲಿನ್‌ಗಳನ್ನು ಕೂಡಾ ತೆಗೆಸಿದ್ದಾರೆ. ಮಳೆ ಬಂದು, ಇಲ್ಲವೇ ಏನಾದರೂ ಆಗಿ ನಮ್ಮ ಲಾರಿಯಲ್ಲಿದ್ದ ಸರಕಿಗೆ ಹಾನಿಯಾದರೆ ಅಧಿಕಾರಿಗಳೇ ಹೊಣೆ. ಬೆಳಗ್ಗಿನಿಂದ ಅಧಿಕಾರಿಗಳು ನಮಗೆ ಕಿರುಕುಳ ನೀಡಿದ್ದು, ಈ ಬಗ್ಗೆ ನಾವು ಅಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತೇವೆ ಎಂದು ಲಾರಿ ಚಾಲಕರು ತಿಳಿಸಿದ್ದಾರೆ.
ತಪಾಸಣೆ ನಡೆಸಿ ಮುಂದಿನ ಪ್ರಕ್ರಿಯೆ: ರುದ್ರಪ್ಪ
ಈ ಲಾರಿಯಲ್ಲಿ ಬಿಲ್‌ನಲ್ಲಿರುವುದಕ್ಕಿಂತ ಹೆಚ್ಚಿನ ಸರಕುಗಳು ಇರುವ ಬಗ್ಗೆ ಸಂಶಯವಿದ್ದು, ಪ್ಲೈವುಡ್ ಮಾಲಕರು ಬಂದ ಬಳಿಕ ಲೋಡನ್ನು ಕೆಳಗಿಳಿಸಿ ತಪಾಸಣೆ ನಡೆಸುತ್ತೇವೆ. ಅವರು ಬರುವಾಗ ರಾತ್ರಿಯಾಗಬಹುದು. ಒಂದು ವೇಳೆ ಅವರು ಬರದಿದ್ದರೆ ಪೊಲೀಸರಿಗೆ ಈ ಪ್ರಕರಣವನ್ನು ಹಸ್ತಾಂತರಿಸಲಾಗುವುದು ಎಂದು ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಕಮಿಷನರ್ ರುದ್ರಪ್ಪ ಪತ್ರಿಕೆಗೆ ತಿಳಿಸಿದ್ದಾರೆ.
ಮರಳಿಗೆ ವಿನಾಯಿತಿ ನೀಡಿದ ಅಧಿಕಾರಿ!
ನಿಗದಿತ ಮಿತಿಗಿಂತ ಅಧಿಕ ಬಾರ ಸಾಗಿಸುವ ಮರಳು ಲಾರಿಗಳ ವಿರುದ್ಧವೂ ವಾಣಿಜ್ಯ ತೆರಿಗೆ ಇಲಾಖೆ ಕೈಗೊಳ್ಳುತ್ತಾ ಎಂದು ಈ ಸಂದರ್ ಪತ್ರಕರ್ತರೋರ್ವರು ಸ್ಥಳದಲ್ಲಿದ್ದ ವಾಣಿಜ್ಯ ತೆರಿಗೆ ಅಧಿಕಾರಿ ಸುಬ್ರಹ್ಮಣ್ಯ ಅವರಲ್ಲಿ ಪ್ರಶ್ನಿಸಿದ್ದು, ಅದಕ್ಕವರು, ಱಮರಳು ಲಾರಿಗಳ ಹಿಂದುಗಡೆ ಮೂರ್ನಾಲ್ಕು ಬೆಂಗಾವಲು ವಾಹನಗಳಿರುತ್ತವೆ. ಅಲ್ಲದೇ, ಅವರಿಗೆ ರಾಜಕೀಯ ಸಪೋರ್ಟ್ ಕೂಡಾ ಇದೆ. ಇದೆಲ್ಲಾ ನಿಮಗೆ ಗೊತ್ತಿರುವುದೇ. ಆದ್ದರಿಂದ ಈ ಲಾರಿಗಳ ವಿರುದ್ಧ ಕ್ರಮ ಜರಗಿಸಲು ಅಷ್ಟು ಸುಲದಲ್ಲಿ ಸಾಧ್ಯವಿದೆಯಾ?ೞೞಎಂದು ಉತ್ತರ ನೀಡುವ ಮೂಲಕ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸುವಂತೆ ಮಾಡಿದರು.
ಅವ್ಯಾಹತವಾಗಿ ಕೇಳಿಬರುತ್ತಿದೆ ಲಂಚದ ಆರೋಪ:
ವಾಣಿಜ್ಯ ತೆರಿಗೆ ಇಲಾಖೆಗೆ ಸೇರಿದ ಜಾಗೃತ್ ಎಂಬ ವಾಹನವೊಂದಿದ್ದು, ಈ ವಾಹದಲ್ಲಿರುವ ಅಧಿಕಾರಿಗಳು ಸತತವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕರನ್ನು ಹಣಕ್ಕಾಗಿ ಪೀಡಿಸುತ್ತಾರೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ. ತಪಾಸಣೆಯ ನೆಪದಲ್ಲಿ ಲಾರಿಗಳನ್ನು ನಿಲ್ಲಿಸುವ ಇವರು ಎಲ್ಲಾ ದಾಖಲೆಗಳು ಸರಿ ಇದ್ದರೂ ಹಣ ಕೊಡದೇ ಲಾರಿಗಳನ್ನು ಬಿಡುವುದೇ ಇಲ್ಲ. ಆದರೆ ದೊಡ್ಡ ದೊಡ್ಡ ಕುಳಗಳಿಗೆ ಸೇರಿದ ಅಡಿಕೆ, ಮರಳು ಮುಂತಾದ ಸರಕುಗಳು ದಾಖಲೆ ಇಲ್ಲದೆ ರಾಜಾರೋಷವಾಗಿ ಸಾಗುತ್ತಿದ್ದರೂ ಇವರು ಅವರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಮಾತುಗಳು ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.










