ಗೋವಿಂದೇಗೌಡ, ಸಾ.ಶಿ.ಮರುಳಯ್ಯ ಸೇರಿ ಅಗಲಿದ ಗಣ್ಯರಿಗೆ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ
ರಾಜ್ಯ ವಿಧಾನಮಂಡಲ ಅಧಿವೇಶನ

ಬೆಂಗಳೂರು, ಮಾ.1: ಮಾಜಿ ಸಚಿವರಾದ ಎಚ್.ಜಿ.ಗೋವಿಂದೇಗೌಡ, ಎಂ.ಎಂ.ನಾಣಯ್ಯ, ಹಿರಿಯ ಸಾಹಿತಿ ಡಾ.ಸಾ.ಶಿ.ಮರುಳಯ್ಯ, ನಿರ್ದೇಶಕ ಗೀತಪ್ರಿಯ, ಸಿಯಾಚಿನ್ ದುರಂತದಲ್ಲಿ ಮಡಿದ ವೀರ ಯೋಧರು ಸೇರಿದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಮಂಗಳವಾರ ವಿಧಾನಸಭೆ ಹಾಗೂ ವಿಧಾನ ಪರಿಷತ್ ಅಧಿಕೃತ ಕಲಾಪ ಆರಂಭ ಆಗುತ್ತಿದ್ದಂತೆಯೇ ಸ್ಪೀಕರ್ ಕಾಗೋಡು ತಿಮ್ಮಪ್ಪ ಮತ್ತು ಸಭಾಪತಿ ಡಿ.ಎಚ್.ಶಂಕರ ಮೂರ್ತಿ, ಸಂತಾಪ ಸೂಚನೆ ನಿರ್ಣಯ ಮಂಡಿಸಿ, ಅಗಲಿದ ಗಣ್ಯರ ಗುಣಗಾನ ಮಾಡಿ ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದರು.
ಆದರ್ಶ ವ್ಯಕ್ತಿ: ಸ್ಪೀಕರ್ ಮಂಡಿಸಿದ ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಮಲೆನಾಡ ಗಾಂಧಿ ಎಂದೇ ಖ್ಯಾತಿಗಳಿಸಿದ್ದ ಗೋವಿಂದೇಗೌಡ ಅವರು 1.5 ಲಕ್ಷ ಮಂದಿ ಶಿಕ್ಷಕರನ್ನು ಪಾರದರ್ಶಕವಾಗಿ ನೇಮಿಸಿದ ಆದರ್ಶ ವ್ಯಕ್ತಿ ಎಂದು ಬಣ್ಣಿಸಿದರು.
ಕಸಾಪ ಮಾಜಿ ಅಧ್ಯಕ್ಷ, ಹಿರಿಯ ಸಾಹಿತಿ ಸಾ.ಶಿ.ಮರುಳಯ್ಯ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕನ್ನಡದಲ್ಲೆ ಐಎಎಸ್ ಮತ್ತು ಕೆಎಎಸ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳನ್ನು ತಯಾರು ಮಾಡಲು ಒಂದು ಆಂದೋಲನವನ್ನೇ ನಡೆಸಿದ್ದರು ಎಂದು ಸಿದ್ಧರಾಮಯ್ಯ ಶ್ಲಾಘಿಸಿದರು.
ಮಾಜಿ ಸಚಿವ ಎಂ.ಎಂ.ನಾಣಯ್ಯ, ಮಾಜಿ ಶಾಸಕರಾದ ಟಿ.ಜಿ.ತಿಮ್ಮೇಗೌಡ, ಶರಣ ಬಸಪ್ಪ ಮಾಲಿ ಪಾಟೀಲ್ ದಂಗಾಪೂರ್, ನಿರ್ದೇಶಕ ಗೀತಪ್ರಿಯ ಹಾಗೂ ಪಠಾಣ್ ಕೋಟ್‌ನಲ್ಲಿ ಹುತಾತ್ಮರಾದ ಬೆಂಗಳೂರು ಮೂಲದ ಕರ್ನಲ್ ನಿರಂಜನ್ ಸೇರಿದಂತೆ ಯೋಧರಿಗೆ ಹಾಗೂ ಸಿಯಾಚಿನ್ ದುರಂತದಲ್ಲಿ ಮಡಿದ ಹನುಮಂತಪ್ಪ ಕೊಪ್ಪದ್, ಸುಬೇದಾರ್ ನಾಗೇಶ್ ಮತ್ತು ಮಹೇಶ್ ಅವರನ್ನು ಸ್ಮರಿಸಿದ ಸಿದ್ಧರಾಮಯ್ಯ, ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ಸಂತಾಪ ಸೂಚನೆ ನಿರ್ಣಯವನ್ನು ಬೆಂಬಲಿಸಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಆಡಳಿತ ಪಕ್ಷದ ಜೆ.ಆರ್.ಲೋಬೋ, ಕೆ.ಆರ್.ರಮೇಶ್ ಕುಮಾರ್, ಜೆಡಿಎಸ್ ಉಪ ನಾಯಕ ವೈಎಸ್‌ವಿ ದತ್ತ, ಬಿಜೆಪಿಯ ಸಿ.ಟಿ.ರವಿ, ಜೀವರಾಜ್ ಸೇರಿದಂತೆ ಹಲವು ಸದಸ್ಯರು ಅಗಲಿದ ಗಣ್ಯರ ಗುಣಗಾನ ಮಾಡಿದರು.
ಅನಂತರ ವಿಧಾನ ಮಂಡಲ ಉಭಯ ಸದನಗಳಲ್ಲಿ ಒಂದು ನಿಮಿಷ ವೌನಾಚರಣೆ ಮಾಡಿ ಅಗಲಿದ ಗಣ್ಯರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ, ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು.
ಶಾಲೆಗಳ ಸುಧಾರಣೆಗೆ ಶ್ರಮಿಸಿದ ಗೋವಿಂದೇಗೌಡರಿಗೆ ಶ್ರದ್ಧಾಂಜಲಿ ಅರ್ಪಿಸುವ ಅರ್ಹತೆ ತಮಗಿದೆಯೇ ಎಂದು ಸದಸ್ಯರೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸರಕಾರಿ ಶಾಲೆಗಳು ಮುಚ್ಚುವಂತಹ ಸ್ಥಿತಿಗೆ ಬರಲು, ವೌಲ್ಯಗಳ ಕುಸಿತಕ್ಕೆ ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟಿನಿಂದ ಇದ್ದೇವೆ. ಈ ಬೆಳವಣಿಗೆಗಳು ಅವರಿಗೆ ಎಷ್ಟು ನೋವು ತಂದಿರಲಿಕ್ಕಿಲ್ಲ. ಹೀಗಾಗಿ ಪೋಷಕರ ರಕ್ತಹೀರುವ ಆಂಗ್ಲ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು, ಸರಕಾರಿ ಶಾಲೆಗಳಿಗೆ ಪುನರ್ಜನ್ಮ ನೀಡುವುದೇ ಅವರಿಗೆ ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ -ಆರ್.ರಮೇಶ್ ಕುಮಾರ್, ಮಾಜಿ ಸ್ಪೀಕರ್
ಉರ್ದು ಅಕಾಡಮಿ ಅಧ್ಯಕ್ಷರನ್ನು ಮರೆತ ‘ಸದನ’
ಬೆಂಗಳೂರು, ಮಾ.1: ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ರಾಜ್ಯ ಉರ್ದು ಅಕಾಡಮಿ ಅಧ್ಯಕ್ಷೆ ಡಾ.ಫೌಝಿಯಾ ಚೌಧರಿಯನ್ನು ಯಾರೊಬ್ಬರು ಸ್ಮರಿಸಿಕೊಳ್ಳಲಿಲ್ಲ.
ಡಾ.ಫೌಝಿಯಾ ಚೌಧರಿ ಇತ್ತೀಚೆಗಷ್ಟೆ ಕನ್ನಡ ಭವನದಲ್ಲಿರುವ ಉರ್ದು ಅಕಾಡಮಿ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದರು.
ಬಿಜೆಪಿ ನಿಲುವಳಿ ಸೂಚನೆಗೆ ಅವಕಾಶ ನಿರಾಕರಣೆ
ಬೆಂಗಳೂರು, ಮಾ.1: ಮುಖ್ಯಮಂತ್ರಿ ಸಿದ್ದರಾಮಯ್ಯ ಧರಿಸಿದ್ದ ದುಬಾರಿ ಕೈ ಗಡಿಯಾರದ ಕುರಿತು ನಿಲುವಳಿ ಸೂಚನೆ ಮೇರೆಗೆ ಸದನದಲ್ಲಿ ಚರ್ಚೆ ನಡೆಸಲು ಪ್ರತಿಪಕ್ಷ ಬಿಜೆಪಿ ಸಲ್ಲಿಸಿದ್ದ ಮನವಿಯನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ನಿರಾಕರಿಸಿದರು.







