ನಾನು ಸಂಪುಟಕ್ಕೆ ಭೂಷಣ:ಸಚಿವ ವಿ.ಶ್ರೀನಿವಾಸ ಪ್ರಸಾದ್

ಬೆಂಗಳೂರು, ಮಾ.1: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗಿಂತಲೂ ತಾನು ಹಿರಿಯ ರಾಜಕಾರಣಿ. ಮಾತ್ರವಲ್ಲ ಅನುಭವಿ, ನಾನು ಇರುವುದರಿಂದ ಸಚಿವ ಸಂಪುಟಕ್ಕೊಂದು ಗೌರವ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ನುಡಿದಿದ್ದಾರೆ.
ಮಂಗಳವಾರ ವಿಧಾನಸೌಧದ ಮೊಗಸಾಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಾನು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೇಳಿಕೊಂಡು ಸಚಿವನಾಗಿಲ್ಲ. ವಾಜಪೇಯಿ ಪ್ರಧಾನಿಯಾಗಿದ್ದ ವೇಳೆ ತಾನು ಕೇಂದ್ರ ಸಂಪುಟದಲ್ಲಿ ಸಚಿವನಾಗಿ ಕೆಲಸ ಮಾಡಿದ ಅನುಭವವಿದೆ. ನನ್ನಂಥವರು ಸಂಪುಟದಲ್ಲಿರುವುದು ಭೂಷಣ ಎಂದು ಸಂಪುಟದಿಂದ ಕೈಬಿಡುವ ಪ್ರಸ್ತಾವನೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ಏಕವಚನ ಪ್ರಯೋಗ: ಆತ ನನಗೂ ಒಳ್ಳೆಯ ಸ್ನೇಹಿತ. ಆದರೆ, ಪ್ರಚಾರದ ಹುಚ್ಚು. ಯಾರೂ ಸಿಗದೆ ಇದ್ದರೆ ಸ್ವಂತ ಮನೆಯವರ ವಿರುದ್ಧವೇ ಮಾತನಾಡುತ್ತಾನೆ. ಮಾತನಾಡಲಿ, ನನ್ನನ್ನು ಪ್ರಶ್ನಿಸಲು ಆತ ಯಾರು. ನಾನೇನು ಕೆಲಸ ಮಾಡುತ್ತೇನೆಂದು ಆತನಿಗೆ ವರದಿ ನೀಡುವ ಅಗತ್ಯವಿಲ್ಲ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ವಿರುದ್ಧ ಕಿಡಿಕಾರಿದರು.





