ಸಿ.ಟಿ.ರವಿಯ ಸೇನೆಯ ಪ್ರೇಮಕ್ಕೆ ರಮೇಶ್ ಕುಮಾರ್ ವ್ಯಂಗ್ಯ

ಬೆಂಗಳೂರು, ಮಾ.1: ‘ಹೊಟ್ಟೆಪಾಡಿಗಾಗಿ ಸೈನ್ಯಕ್ಕೆ ಸೇರಿಕೊಳ್ಳುತ್ತಾರೆ’ ಎಂದು ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಹೇಳಿಕೆ ನೀಡುವ ಮೂಲಕ ದೇಶದ ಸೈನಿಕರಿಗೆ ಅಪಮಾನ ಮಾಡಿದ್ದಾರೆಂದು ಬಿಜೆಪಿ ಸದಸ್ಯ ಸಿ.ಟಿ.ರವಿ ಸಿಎಂ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅವರ ಹೆಸರು ಹೇಳದೆ ಟೀಕಿಸಿದರು. ಆದರೆ, ಇದೇ ಸಂದರ್ಭದಲ್ಲಿ ಸಿ.ಟಿ.ರವಿಯನ್ನು ವ್ಯಂಗ್ಯ ಮಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ರಾಜಕಾರಣಿಗಳ ಮಕ್ಕಳು ಯಾಕೆ ಸೇನೆಗೆ ಸೇರುವುದಿಲ್ಲ ಎಂದು ಪ್ರಶ್ನಿಸಿದರು.
ಮಂಗಳವಾರ ವಿಧಾನಸಭೆಯಲ್ಲಿ ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಮಾತನಾಡಿದ ಸಿ.ಟಿ.ರವಿ, ಸಿಯಾಚಿನ್ ದುರಂತದಲ್ಲಿ ವೀರ ಮರಣವನ್ನಪ್ಪಿದ ಯೋಧ ಹನುಮಂತಪ್ಪ ಕೊಪ್ಪದ್ ಅವರ ಪತ್ನಿ ಮಹಾದೇವಿ ತನ್ನ ಪುತ್ರಿಯನ್ನು ಸೈನ್ಯಕ್ಕೆ ಸೇರಿಸುವೆ ಎಂದು ಹೇಳಿಕೆ ನೀಡಿರುವುದು ಹೊಟ್ಟೆಪಾಡಿಗಾಗಿಯೇ ಎಂದು ಪ್ರಶ್ನಿಸಿದರು.
ದೇಶದ ಸೈನಿಕರಿಗೆ ಅಪಮಾನ ಮಾಡುವ ರೀತಿಯಲ್ಲಿ ಹೇಳಿಕೆ ನೀಡುವವರು ದಾರಿ ತಪ್ಪಿದ್ದು, ಬೇರೆಯವರನ್ನು ದಾರಿ ತಪ್ಪಿಸುವ ಕೆಲಸದಲ್ಲಿ ತೊಡಗಿದ್ದಾರೆ. ಅವರಿಗೆ ಮಾನವೀಯತೆಯ ಅರ್ಥವೇ ಗೊತ್ತಿಲ್ಲ ಎಂದು ಆಕ್ಷೇಪಿಸಿದ ರವಿ, ಅವರು ಕೂಡಲೇ ದೇಶದ ಸೈನಿಕರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ನಮ್ಮ ಮಕ್ಕಳು ಚುನಾವಣೆಗೆ ನಿಲ್ಲಬೇಕಲ್ಲ...ನಮ್ಮ ರಕ್ಷಣೆಗಾಗಿ ಅವರು (ಸೈನಿಕರು) ಸಾಯಬೇಕು. ಆದರೆ, ನಮ್ಮ ಮಕ್ಕಳು ಮಾತ್ರ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ನಿಂತು ಗೆಲ್ಲಬೇಕು. ಅವರು ಸತ್ತರೇ ನಾವು ರಾಜಕಾರಣ ಮಾಡಲು ಸಾಧ್ಯ. ಲೂಟಿಕೋರರೆಲ್ಲ ಒಗ್ಗಟ್ಟಾಗಿದ್ದೇವೆ. ನಮ್ಮ ಮಕ್ಕಳ್ಯಾರೂ ಸೈನ್ಯಕ್ಕೆ ಸೇರುವುದಿಲ್ಲ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಸಿ.ಟಿ.ರವಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.





