ಮಧ್ಯಮ ವರ್ಗಕ್ಕೆ ಪೆಟ್ಟು ಕೊಟ್ಟ ಜೇಟ್ಲಿ: ಆಪ್ ಟೀಕೆ
ಬೆಂಗಳೂರು, ಮಾ.1: ಕೇಂದ್ರ ಸರಕಾರವು 2016-17ನೆ ಸಾಲಿನ ಬಜೆಟ್‌ನಲ್ಲಿ ಆದಾಯ ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡದೆ, ಇನ್ನಷ್ಟು ತೆರಿಗೆಗಳನ್ನು ಜಾರಿ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ಬರೆ ಎಳೆದಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಹ ಸಂಚಾಲಕ ಶಿವಕುಮಾರ ಚೆಂಗಲರಾಯ ಟೀಕಿಸಿದ್ದಾರೆ.
ದುಡಿಯುವ ವರ್ಗದ ಭವಿಷ್ಯ ನಿಧಿಯ ಶೇ.60ರಷ್ಟು ಹಣವನ್ನು ತೆರಿಗೆ ವ್ಯಾಪ್ತಿಗೆ ತರಲಾಗಿದ್ದು, ಜನರ ಕಷ್ಟದ ಬೆಂಕಿಗೆ ತುಪ್ಪಸುರಿಯುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಮಾಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಣದುಬ್ಬರ ಇಳಿಸುವ ಯಾವುದೇ ಕಾರ್ಯಕ್ಕೆ ಕೈ ಹಾಕಿಲ್ಲ, ರಫ್ತು ಉತ್ತೇಜನಕ್ಕೂ ಆದ್ಯತೆ ನೀಡಲಾಗಿಲ್ಲ. ತೆರಿಗೆ ಸಂಗ್ರಹಣೆಯಲ್ಲಿ ಸರಕಾರ ಹಿಂದೆಬಿದ್ದಿದೆ ಎಂದು ಸ್ವತಃ ವಿತ್ತ ಸಚಿವ ಅರುಣ್ ಜೇಟ್ಲಿ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ ಎಂದು ಅವರು ಪ್ರಕಟನೆಯಲ್ಲಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 13 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಟ್ಟದಲ್ಲಿದ್ದರೂ, ಮಿನಿರಲ್ ವಾಟರ್‌ಗಿಂತ ಅಗ್ಗದ ದರದಲ್ಲಿ ಲಭ್ಯವಿದ್ದರೂ ಅದರ ಲಾಭವನ್ನು ಜನರಿಗೆ ತಲುಪಿಸದೆ, ಅದರ ಮೇಲೆ ಅಬಕಾರಿ ಸುಂಕ ಹೆಚ್ಚಿಸುತ್ತಾ, ತೆರಿಗೆ ಸಂಗ್ರಹಣೆಯಲ್ಲಿನ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಜನಸಾಮಾನ್ಯರ ಜೇಬಿನಿಂದ 54 ಸಾವಿರ ಕೋಟಿ ರೂ.ತೆರಿಗೆ ಕಟ್ಟಿಸಿಕೊಂಡಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಪ್ಪುಹಣದ ವಿರುದ್ಧ ಗುಡುಗುತ್ತಾ ಅಧಿಕಾರ ಹಿಡಿದ ನರೇಂದ್ರ ಮೋದಿ, ಕಪ್ಪುಹಣ ಗಳಿಕೆದಾರರನ್ನು ರಕ್ಷಿಸಲು ಸ್ವಯಂಪ್ರೇರಿತ ಘೋಷಣೆ ಯೋಜನೆಯನ್ನು ಜಾರಿಗೆ ತಂದಂತಿದೆ. ಈ ಮೂಲಕ ಭ್ರಷ್ಟ ಅಧಿಕಾರಿಗಳು ಹಾಗೂ ಭ್ರಷ್ಟ ರಾಜಕಾರಣಿಗಳು ಇನ್ನು ಮುಂದೆ ಇಟಾಸ್ಕಾದಂತಹ ಬೇನಾಮಿ ಕಂಪೆನಿಗಳನ್ನು ಸೃಷ್ಟಿಸುವ ಅಗತ್ಯವಿಲ್ಲದೆ ಜನರಿಂದ ಲೂಟಿ ಮಾಡಿದ ಅಕ್ರಮ ಹಣವನ್ನು ಸಕ್ರಮ ಮಾಡಿಕೊಳ್ಳಬಹುದಾಗಿದೆ ಎಂದು ಶಿವಕುಮಾರ್ ದೂರಿದ್ದಾರೆ.







