ರಾಜ್ಯ ಮುಕ್ತ ವಿವಿ ಕಾರ್ಯವೈಖರಿಗೆ ಹೈಕೋರ್ಟ್ ಅಸಮಾಧಾನ
ಬೆಂಗಳೂರು, ಮಾ.1: ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾರ್ಯವೈಖರಿ ಬಗ್ಗೆ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ನ್ಯಾಯಪೀಠವು, ಹೈಕೋರ್ಟ್ನ ಆದೇಶಗಳನ್ನು ಸರಕಾರ ಕಡೆಗಣಿಸುತ್ತಿದ್ದು, ಯಾವುದನ್ನೂ ಪಾಲನೆ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಮೂಲಸೌಕರ್ಯಗಳ ಕೊರತೆ ಮುಂದೊಡ್ಡಿ ‘ಅಧ್ಯಯನ ಕೇಂದ್ರ’ಗಳ ಅನುಮತಿ ರದ್ದುಪಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು, ತರಗತಿಗಳನ್ನು ಕಟ್ಟಡಗಳಲ್ಲಿ ನಡೆಸುತ್ತಿದ್ದೀರೋ, ಇಲ್ಲ ಮರದ ಕೆಳಗೆ ನಡೆಸುತ್ತಿದ್ದೀರೋ ಎಂದು ಪ್ರಶ್ನಿಸಿತು.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲರು, ಸಮಾಜದಲ್ಲಿ ಶಿಕ್ಷಿತ ಮಾನವ ಸಂಪನ್ಮೂಲ ಸೃಜಿಸುವುದು ಮುಕ್ತ ಪರಿಕಲ್ಪನೆಯಾಗಿದೆ. ಕಲಿಕೆಯನ್ನು ಅರ್ಧಕ್ಕೆ ಮೊಟುಕುಗೊಳಿಸಿರುವ ಹಾಗೂ ಕಲಿಕೆ ಮುಂದುವರಿಸಲು ಆಸಕ್ತಿ ಹೊಂದಿರುವವರನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯನಿರ್ವಸುತ್ತಿದೆ. ಹೆಚ್ಚಾಗಿ ಉದ್ಯೋಗಿಗಳು, ಗೃಹಸ್ಥರು, ಮಹಿಳೆಯರು ಮುಕ್ತ ವಿವಿಗಳ ಮೂಲಕ ಶಿಕ್ಷಣ ಪಡೆಯುತ್ತಿದ್ದಾರೆ. ಕೌಶಲ್ಯಾಭಿವೃದ್ಧಿ ಹಾಗೂ ಗುಣಮಟ್ಟದ ಶಿಕ್ಷಣದ ಮೂಲಕ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿ ಪ್ರಮುಖ ಆದ್ಯತೆಯಾಗಿದೆ. ಅಲ್ಲದೆ, ಪಿಎಚ್ಡಿ ಸೇರಿದಂತೆ ಸ್ನಾತಕೋತ್ತರ ಪದವಿಗಳನ್ನು ನೀಡಲಾಗುತ್ತಿದೆ ಎಂದು ವಿವರಿಸಿದರು.
ಮೂಲಸೌಕರ್ಯಗಳೇ ಇಲ್ಲದಿದ್ದ ಮೇಲೆ ಶಿಕ್ಷಣ ಪಡೆಯುವುದು ಹೇಗೆ. ಕಲಿಕೆಗೆ ಆಸ್ಪದವೇ ಕಲ್ಪಿಸದ ಸ್ಟಡಿ ಸೆಂಟರ್ಗಳಿಂದ ಗುಣಮಟ್ಟ ಸುಧಾರಣೆ ಆಗುತ್ತದೆಯೇ ಎಂದು ಪ್ರಶ್ನಿಸಿ, ನ್ಯಾಯಪೀಠವು ವಿಚಾರಣೆಯನ್ನು ಮುಂದೂಡಿದೆ.





