ವದಂತಿಗಳಿಗೆ ಕಿವಿಗೊಡದಿರಿ : ಮಂಗಳೂರು ವಿಮಾನ ನಿಲ್ದಾಣ ನಿರ್ದೇಶಕರ ಮನವಿ

ಮಂಗಳೂರು, ಮಾ. 2: ಮಂಗಳೂರು ವಿಮಾನ ನಿಲ್ದಾಣದ ಭದ್ರತೆ, ಕಸ್ಟಮ್ಸ್, ವಲಸೆ ಮತ್ತು ವಿಮಾನಯಾನ ಕಾರ್ಯನಿರ್ವಹಣೆ ಕುರಿತಂತೆ ಕೆಲವರು ತಪ್ಪು ಸಂದೇಶಗಳನ್ನು ಹಬ್ಬಿಸುತ್ತಿದ್ದು, ಅಂತಹ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ದೇಶಕ ಜೆ.ಟಿ. ರಾಧಾಕೃಷ್ಣ ರವರು ಪ್ರಯಾಣಿಕರಲ್ಲಿ ಪತ್ರಿಕಾ ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.
ಭದ್ರತೆ ಮತ್ತು ಪ್ರಯಾಣಿಕರ ಪರಿಶೀಲನೆಗೆ ಸಂಬಂಧಿಸಿ ಯಾವುದೇ ತೊಂದರೆಗಳು ಇಲ್ಲವಾಗಿದ್ದು, ಎಲ್ಲವೂ ಸುಲಲಿತವಾಗಿ ನಡೆಯುತ್ತಿವೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದ 55 ಟಯರ್ 2 ಏರ್‌ಪೋರ್ಟ್‌ಗಳ ಗ್ರಾಹಕ ತೃಪ್ತಿ ಸೂಚ್ಯಾಂಕದಲ್ಲಿ 5ನೆ ಸ್ಥಾನದಲ್ಲಿದೆ. ಹೀಗಿದ್ದರೂ ಕೆಲವರಿಂದ ಅಪಪ್ರಚಾರದ ಮೂಲಕ ಪ್ರಯಾಣಿಕರಲ್ಲಿ ಗೊಂದಲ ಸೃಷ್ಟಿಸುವ ಕಾರ್ಯ ನಡೆಯುತ್ತಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಆದಲ್ಲಿ ಅವರು ತಕ್ಷಣ ವಿಮಾನ ನಿಲ್ದಾಣದ ಟರ್ಮಿನಲ್ ಡ್ಯೂಟಿ ಮ್ಯಾನೇಜರ್ (24 ಗಂಟೆಯೂ ಲಭ್ಯವಾಗಿರುತ್ತಾರೆ)ರನ್ನು ಸಂಪರ್ಕಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ.
ಮಾತ್ರವಲ್ಲದೆ, ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡದಲ್ಲಿ ವಿಮಾನ ಯಾನಗಳನ್ನು ನಿರ್ವಹಿಸುವವವರ ಸಾರ್ವಜನಿಕ ದೂರು ಸ್ವೀಕಾರ ಬೋರ್ಡ್‌ಗಳನ್ನೂ ಹಾಕಲಾಗಿದ್ದು, ಅಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು, ಈಮೇಲ್‌ಗಳ ಮೂಲಕವೂ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ.
ಈ ಕೆಳಗಿನ ದೂರವಾಣಿ ಸಂಖ್ಯೆಗಳು ಪ್ರಯಾಣಿಕರಿಗೆ ತುರ್ತು ಸಂದರ್ಭಗಳಲ್ಲಿ ಯಾವುದೇ ರೀತಿಯ ದೂರು, ಮಾರ್ಗದರ್ಶನಕ್ಕೆ ದಿನದ 24 ಗಂಟೆಯೂ ನೆರವು ನೀಡಲಿದೆ. ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರು ವಿಮಾನ ನಿಲ್ದಾಣದ ವಿಶ್ರಾಂತಿ ಕೊಠಡಿಗಳನ್ನೂ ಬಳಸಿಕೊಳ್ಳಬಹುದು ಎಂದು ಜಿ.ಟಿ. ರಾಧಾಕೃಷ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
*ಟರ್ಮಿನಲ್ ಡ್ಯೂಟಿ ಮ್ಯಾನೇಜರ್, ಎಎಐ ದೂ.ಸಂ.- 2220422/9449005201
* ಸಿಐಎಸ್‌ಎಫ್ (ಏರ್‌ಪೋರ್ಟ್ ಸೆಕ್ಯೂರಿಟಿ) ಕಂಟ್ರೋಲ್ ರೂಂ ದೂ.ಸಂ. 0824- 2220418





